Udupi: ನಿನ್ನೆ ನಡೆದ ಅಗ್ನಿ ಅವಘಡದಲ್ಲಿ ಪತಿ ಸಾವು ಇಂದು ಪತ್ನಿಯೂ ಸಾವು
Tuesday, July 16, 2024
ಉಡುಪಿ: ಅಂಬಲಪಾಡಿ ಗಾಂಧಿನಗರದಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮನೆಯೊಡತಿ ಅಶ್ವಿನಿ ಶೆಟ್ಟಿ (47) ಮಂಗಳವಾರ ನಿಧನರಾದರು. ಮನೆಯೊಡೆಯ ರಮಾನಂದ ಶೆಟ್ಟಿ ಘಟನೆ ಸಂದರ್ಭವೇ ಅಸುನೀಗಿದ್ದರು.
ಅಶ್ವಿನಿ ಶೆಟ್ಟಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದರು. ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ಬಂಟರ ಸಂಘ, ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿದ್ದು, ತುಳುನಾಡಿನ ಆಚಾರ ವಿಚಾರಗಳನ್ನು ಬಿಂಬಿಸುವ ವೀಡಿಯೊಗಳನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಿ ಖ್ಯಾತಿ ಗಳಿಸಿದ್ದರು.
ಘಟನೆಯಲ್ಲಿ ಘಾಸಿಗೊಂಡಿರುವ ಮಕ್ಕಳಾದ ಹಂಸಿಜಾ (20) ಮತ್ತು ಅಭಿಕ್ (16) ಪಾರಾಗಿದ್ದಾರೆ. ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಶ್ವಿನಿ ಶೆಟ್ಟಿ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಾಜಿ ಶಾಸಕ ರಘುಪತಿ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ.
ದಂಪತಿಗಳೀರ್ವರ ಅಂತ್ಯಕ್ರಿಯೆ ಮಂಗಳವಾರ ಬೀಡಿನಗುಡ್ಡೆಯಲ್ಲಿ ನಡೆಯಿತು.