
Udupi: ಮಕ್ಕಳ ವಿಭಿನ್ನ ಕಾಯಿಲೆ-ಗಮನಹರಿಸಲು ಸೂಚನೆ
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ನವದೆಹಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅಪೂರ್ವ ಚಂದ್ರ ಅವರನ್ನು ಭೇಟಿಯಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆ (ಕೆಎಂಸಿ)ಯಲ್ಲಿ ಮಕ್ಕಳ ವಿಭಿನ್ನ ಕಾಯಿಲೆಗಳ ಚಿಕಿತ್ಸೆಗೆ ಕೇಂದ್ರ ಸರಕಾರದ ಸಹಕಾರದ ಕುರಿತು ಚರ್ಚಿಸಿದರು.
ಥಲಸ್ಸೆಮಿಯಾ ಅಪ್ಲಾಸ್ಟಿಕ್ ಅನೇಮಿಯಾ ಎಂಬ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಮಕ್ಕಳ ಅರೋಗ್ಯದ ಮೇಲೆ ಮಾತ್ರವಲ್ಲದೆ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆಯೂ ಭೀಕರ ಹೊಡೆತ ನೀಡುತ್ತಿದೆ.
ಈ ಕಾಯಿಲೆ ಬಾಧಿಸಿದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಖರ್ಚು ತಗಲುವ ಸಂಭವವಿದೆ. ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆ ಮುಖಾಂತರ ಈಗಾಗಲೇ ಬಹಳಷ್ಟು ಮಕ್ಕಳಿಗೆ ಈ ಚಿಕಿತ್ಸೆ ನೀಡಲಾಗಿದೆ. ಈ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರತಿಷ್ಠಿತ ಕೋಲ್ ಇಂಡಿಯಾ ಸಂಸ್ಥೆ ಸುಮಾರು 10ರಿಂದ 15 ಲಕ್ಷ ರೂ.ವರೆಗೆ ನೆರವು ನೀಡುತ್ತದೆ.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಧ್ಯಪ್ರವೇಶಿಸಿ ಪ್ರಸ್ತುತ ಇರುವ ತಾಂತ್ರಿಕ ದೋಷ ಸರಿಪಡಿಸಿ ರೋಗಿಗಳಿಗೆ ನೆರವಾಗುವಂತೆ ವಿನಂತಿಸಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ. ನಡ್ಡಾ ಅವರಿಗೆ ಇಲಾಖೆ ಕಾರ್ಯದರ್ಶಿ ಮೂಲಕ ಮನವಿ ಮಾಡಲಾಯಿತು.