
Ujire: ಧರ್ಮಸ್ಥಳ ಶಿವಪಾರ್ವತಿಕೃಪಾದಲ್ಲಿ ‘ಮನೆ ಮನೆ ಗಮಕ ಕಾರ್ಯಕ್ರಮ’
ಉಜಿರೆ: ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ವತಿಯಿಂದ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದ ಸಹಯೋಗದೊಂದಿಗೆ ಧರ್ಮಸ್ಥಳದ ಶಿವಪಾರ್ವತಿ ಕೃಪಾದಲ್ಲಿ ಜೂ.29 ರಂದು ‘ಮನೆ ಮನೆ ಗಮಕ ಕಾರ್ಯಕ್ರಮ’ ನಡೆಯಿತು.
ಜೈಮಿನಿ ಭಾರತ ಕಾವ್ಯ ಭಾಗದ ಉದ್ಧಾಲಕ ಕಥೆಯ ಆಯ್ದ ಭಾಗವನ್ನು ಹಿರಿಯ ಗಮಕಿ, ತಾಲೂಕು ಗಮಕ ಕಲಾ ಪರಿಷತ್ ನಿಕಟ ಪೂರ್ವಾಧ್ಯಕ್ಷ ಜಯರಾಮ ಕುದ್ರೆತ್ತಾಯ ವಾಚಿಸಿ, ಯಕ್ಷಗಾನ ಅರ್ಥಧಾರಿ, ತಾಲೂಕು ಗಮಕ ಕಲಾ ಪರಿಷತ್ ಸ್ಥಾಪಕಾಧ್ಯಕ್ಷ ಸುರೇಶ ಕುದ್ರೆನ್ತಯ ಮತ್ತು ಉಡುಪಿಯ ಸುಜಲಾ ನಾರಾಯಣ ಭಟ್ ವ್ಯಾಖ್ಯಾನಿಸಿದರು.
ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ಉಜಿರೆ ನಿನ್ನಿಕಲ್ಲು ರಾಮಕೃಷ್ಣ ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. ನಿವೃತ್ತ ಶಿಕ್ಷಕ, ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಪಡುವೆಟ್ನಾಯ ವಂದಿಸಿದರು.
ಗಮಕ ಕಲಾ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ, ಕಲಾ ಪೋಷಕ ಬಿ. ಭುಜಬಲಿ, ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಧರ್ಮಸ್ಥಳ ವಲಯಾಧ್ಯಕ್ಷ ಡಾ. ಶ್ರೀಪತಿ ಆರ್ಮುಡತ್ತಾಯ, ತಾಲೂಕು ಗಮಕ ಕಲಾ ಪರಿಷತ್ ಕಾರ್ಯದರ್ಶಿ ಮೇಧಾ, ಕೋಶಾಧಿಕಾರಿ ಸುವರ್ಣಕುಮಾರಿ ಕಲ್ಲೂರಾಯ, ಶಿಕ್ಷಕ ಅಶೋಕ ಭಟ್, ಗಮಕಿ ಮನೋರಮಾ ತೋಳ್ಪಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಶಿವಪಾರ್ವತಿ ಕೃಪಾದ ಗಿರೀಶ್ ಕುದ್ರೆನ್ತಯ ಕಾರ್ಯಕ್ರಮ ಪ್ರಾಯೋಜಿಸಿದ್ದರು.