Ujire: ಆಸಕ್ತಿ, ಅಧ್ಯಯನದಿಂದ ಪತ್ರಿಕೋದ್ಯಮ ಬೆಳೆಯುವುದು: ಹರೀಶ್ ರೈ

Ujire: ಆಸಕ್ತಿ, ಅಧ್ಯಯನದಿಂದ ಪತ್ರಿಕೋದ್ಯಮ ಬೆಳೆಯುವುದು: ಹರೀಶ್ ರೈ


ಉಜಿರೆ: ರಾಜಕಾರಣಿಗಳು ಹಾಗು ಅಧಿಕಾರಿಗಳಿಂದ ಸಮಾಜ ಹಾಳಾಗುತ್ತಿದೆಯೆಂದು ಹೇಳುತ್ತಿದ್ದೇವೆ. ಆದರೆ ಸತ್ಯ, ನೈಜ ಘಟನೆಗಳನ್ನು ಜನರ ಮುಂದಿರಿಸಿದ್ದರೆ ಪತ್ರಿಕೆಗಳಿಗೆ ವರ್ತಮಾನ ಕಾಲದ ಪರಿಸ್ಥಿತಿ ಬರುತ್ತಿರಲಿಲ್ಲ. ಜ್ಞಾನ, ಮನರಂಜನೆ, ಸಮಾಜಕ್ಕೆ ಬೆಳಕು ಕೊಡುವ ವಿಚಾರದಿಂದ ಪತ್ರಿಕೆ ಆರಂಭಗೊಂಡಿತು. ಆಸಕ್ತಿ, ಅಧ್ಯಯನದಿಂದ ಪತ್ರಿಕೋದ್ಯಮ ನಿರಂತರವಾಗಿ ಉಳಿದು, ಬೆಳೆಯುವುದು ಎಂದು ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಹೇಳಿದರು.

ಅವರು ಜು.1 ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 

ಮುಂದಿನ ಎರಡು ದಶಕಗಳಲ್ಲಿ ಕನ್ನಡ ದಿನಪತ್ರಿಕೆ ಅವಸಾನಗೊಳ್ಳುವುದೆಂಬ ಮಾತು ಕೇಳಿಬರುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪತ್ರಿಕೆಗಳು ವಿಶ್ವಾಸಾರ್ಹತೆ, ನಂಬಿಕೆಯಿಂದ ಜನಸ್ನೇಹಿಯಾಗಿವೆ ಎನ್ನಬಹುದು. ಪತ್ರಿಕೆಗಳು ಸಮಾಜಕ್ಕೆ ನ್ಯಾಯ ದೊರಕಿಸುವುದರೊಂದಿಗೆ ಪರಿ ಪೂರ್ಣ ಜ್ಞಾನವನ್ನೊದಗಿಸುತ್ತದೆ.  ಪತ್ರಕರ್ತರಿಗೆ ವರದಿಗಾರಿಕೆಯಲ್ಲಿ ವಿಫುಲ ಅವಕಾಶಗಳಿವೆ. ವರದಿಗಾರಿಕೆ ಕುತೂಹಲ ಮೂಡಿಸುವಂತಿರಬೇಕು. ಆಳ ಅಧ್ಯಯನ, ಅನುಭವ ಗಳಿಕೆಯಿಂದ ಏಕತಾನತೆಯ ವೃತ್ತಿಯಲ್ಲಿ ಉತ್ತಮ ಪತ್ರಕರ್ತರಾಗಬಹುದು. ಕ್ರೈಂ, ರಾಜಕೀಯ ವರದಿ ಹೆಚ್ಚು ಓದುಗರನ್ನು ಸೆಳೆದರೂ ವರದಿಗಾರಿಕೆಯಲ್ಲಿ ಹೊಸತನವಿದ್ದು, ಆಸಕ್ತಿಯಿಂದ ಓದಿ ಸಿಕೊಂಡು ಹೋಗುವಂತಿರಬೇಕು. ಪತ್ರಿಕೆಗಳು ವಿಷಯವನ್ನು ಬಚ್ಚಿಟ್ಟರೆ, ಟಿವಿ ಮಾಧ್ಯಮಗಳು ಅವುಗಳನ್ನು ಬಿಚ್ಚಿಡುತ್ತವೆ ಎಂದು ಹೇಳಿದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂದೇಹ, ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳು ಹೆಚ್ಚು ಶಕ್ತಿಶಾಲಿಯಾಗಿದ್ದರೂ  ಪ್ರತಿಯೊಬ್ಬರಿಗೂ ಮುಂಜಾನೆಯ ಚಹಾದ ವೇಳೆ ಪತ್ರಿಕೆ ಓದದಿದ್ದರೆ ಲವಲವಿಕೆಯಿರುವುದಿಲ್ಲ. ಕೇರಳದಲ್ಲಿ ಪ್ರತಿಯೊಬ್ಬರೂ ದಿನ ಪತ್ರಿಕೆ ಕೊಂಡು ಓದುವ ಹವ್ಯಾಸ  ಬೆಳೆಸಿಕೊಂಡಿದ್ದು, ಕನ್ನಡಿಗರೂ ಪತ್ರಿಕೆ ಕೊಂಡು ಓದುವ ಮೂಲಕ ಪತ್ರಿಕೋದ್ಯಮವನ್ನು ಬೆಳೆಸಬೇಕು. ಎಲ್ಲ ನ್ಯೂನತೆಗಳ ನಡುವೆಯೂ ಭಾವೀ ಪತ್ರಕರ್ತರಾಗುವವರು ಪತ್ರಿಕಾ ಧರ್ಮವನ್ನು ಪಾಲಿಸಿ ಪತ್ರಿಕೋದ್ಯಮವನ್ನು ಬೆಳೆಸಬೇಕು ಎಂದರು.

ಪ್ರಸಕ್ತ ಸಾಲಿನ ಪತ್ರಿಕೋದ್ಯಮ ವಿಭಾಗದ ನೂತನ ಪದಾಧಿಕಾರಿಗಳಾದ ಮದನ್ ಎಂ, ಕನ್ನಿಕಾ ಮತ್ತು ವಿಷ್ಣು ಅವರನ್ನು ಗುರುತಿಸಿ, ಅಧಿಕಾರ ವಹಿಸಿಕೊಡಲಾಯಿತು.

ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ವತಿಯಿಂದ ಹೊರತಂದ ಪ್ರಕಟಿತ ಲೇಖನಗಳ ‘ಹೊಂಗಿರಣ’ ಕೃತಿಯನ್ನು ಪಿ.ಬಿ. ಹರೀಶ್ ರೈ ಬಿಡುಗಡೆಗೊಳಿಸಿದರು.

ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಸ್ವಾಗತಿಸಿ, ಪ್ರಸ್ತಾವಿಸಿ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವವರ ಸಂಖ್ಯೆ ಬೆಳೆದರೆ ಪತ್ರಿಕೋದ್ಯಮ ಬೆಳೆಯುತ್ತದೆ.  ನಾವು ಅವಲೋಕನ ಮಾಡಬೇಕಾದ ವಿಚಾರವಿದು ಎಂದರು. 

ಶರಣ್ಯ ಜೈನ್ ಅತಿಥಿಗಳನ್ನು ಪರಿಚಯಿಸಿದರು. ಮಾನಸ ಅಗ್ನಿಹೋತ್ರಿ ನಿರೂಪಿಸಿ, ಮದನ್ ಎಂ. ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article