ಗ್ರಾಮೀಣ ಪ್ರದೇಶದ ಮಕ್ಕಳ ಕನಸು ನನಸಾಗಿಸಲು ಶ್ರಮ: ಮೋಹನ್ ಕುಮಾರ್

ಗ್ರಾಮೀಣ ಪ್ರದೇಶದ ಮಕ್ಕಳ ಕನಸು ನನಸಾಗಿಸಲು ಶ್ರಮ: ಮೋಹನ್ ಕುಮಾರ್


ಉಜಿರೆ: ನಾನು ವಿದ್ಯೆ ಕಲಿಯಲು ಸೌಲಭ್ಯ, ಅವಕಾಶ ಇರಲಿಲ್ಲ. ಹಾಗಾಗಿ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳು ವಿದ್ಯೆ ಕಲಿಯಬೇಕು ಎಂಬ ಉದ್ದೇಶದಿಂದ, ಅವರ ಕನಸು ನನಸಾಗಿಸಲು ಶ್ರಮವಹಿಸುತ್ತಿದ್ದೇನೆ ಮತ್ತು ಇದರಿಂದ ಸಾರ್ಥಕತೆ ನನ್ನ ಪಾಲಾಗಿದೆ" ಎಂದು ಉಜಿರೆಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.

ತಂಡದ ಸಾಮಾಜಿಕ ಕಾರ್ಯಗಳ ಬಗ್ಗೆ ಪುನರವಲೋಕನಕ್ಕಾಗಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕದ ಸಹಯೋಗದೊಂದಿಗೆ ಓಷ್ಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಜು.17ರಂದು ಆಯೋಜಿಸಿದ್ದ ‘ಕನಸು ಇದು ಭರವಸೆಯ ಬೆಳಕು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬದುಕು ಕಟ್ಟೋಣ ಬನ್ನಿ’ ಸಂಸ್ಥೆ ಪ್ರಾರಂಭವಾದ ನಂತರದ ಯಶಸ್ವಿ ಸೇವೆಗಳು ಮತ್ತು ಎಸ್.ಡಿ.ಎಂ. ಎನ್.ಎಸ್.ಎಸ್. ತಂಡದೊಂದಿಗೆ ಕೈಗೊಂಡ ಕಾರ್ಯಗಳು ಹಾಗೂ ಫಲಶ್ರುತಿ ಕುರಿತ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿದ ಅವರು, ‘ಕನ್ನಡ ಶಾಲೆಯ ಅಭಿವೃದ್ಧಿಗಾಗಿ ಆರಂಭಿಸಿದ ಕೆಲಸ ಬಹಳ ಯಶಸ್ವಿಯಾಗಿದೆ. ವಿದ್ಯೆ ಕಲಿಯದಿದ್ದರೂ ಸಮಾಜಕ್ಕೆ ಮಾದರಿ ಆಗಬೇಕು ಎನ್ನುವ ನನ್ನ ಕನಸು ನನಸಾಗಿದೆ. ಈಗ ಮಕ್ಕಳ ಕನಸನ್ನು ನನಸಾಗಿಸುವ ಹಾದಿಯಲ್ಲಿ ನಾನಿದ್ದೇನೆ’ ಎಂದರು.

ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು. ಎಷ್ಟೋ ಜನರ ಬಾಳಿಗೆ ಮೋಹನ್ ಕುಮಾರ್ ಆಶಾಕಿರಣವಾಗಿದ್ದಾರೆ. ಮಾನವೀಯತೆಯನ್ನು ಮರೆಯುತ್ತಿರುವ ಈ ಸಮಾಜದಲ್ಲಿ, ಸ್ಫೂರ್ತಿಯ ಬದುಕು ಇವರದ್ದಾಗಿದೆ. ಉನ್ನತ ಸಮಾಜವನ್ನು ಕಟ್ಟುವಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಕೆಲಸ ಪ್ರಶಂಸನೀಯ ಎಂದು ಶ್ಲಾಘಿಸಿದರು.

ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಬದುಕು ಕಟ್ಟೋಣ ಬನ್ನಿ ತಂಡದ ವಿದ್ಯಾರ್ಥಿ ಪ್ರೋತ್ಸಾಹನಿಧಿಗೆ ಅರ್ಹರಾದ ಸ್ವಯಂಸೇವಕರ ಹೆಸರನ್ನು ವಾಚಿಸಿದರು.

ಎನ್.ಎಸ್.ಎಸ್.ನ ಹಿರಿಯ ಯೋಜನಾಧಿಕಾರಿ ಡಾ. ಲಕ್ಷ್ಮೀನಾರಾಯಣ ಕೆ.ಎಸ್., ಯೋಜನಾಧಿಕಾರಿ ಪ್ರೊ. ದೀಪಾ ಆರ್.ಪಿ., ಉದ್ಯಮಿ ರವಿ ಚಕ್ಕಿತ್ತಾಯ ಮತ್ತು ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು.

ಬದುಕು ಕಟ್ಟೋಣ ಬನ್ನಿ ತಂಡದ ಇನ್ನೋರ್ವ ಸಂಚಾಲಕ, ಉದ್ಯಮಿ ರಾಜೇಶ್ ಪೈ ಸ್ವಾಗತಿಸಿ, ಪ್ರಸ್ತಾವಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article