
Ullal: ಮೃತದೇಹ ತವರಿಗೆ ಸಾಗಿಸಲು ನೆರವಾರ ಸ್ಪೀಕರ್- ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದ ಯು.ಟಿ. ಖಾದರ್
ಉಳ್ಳಾಲ: ಕಾರವಾರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದ್ದು, ಮೃತದೇಹವನ್ನು ತವರೂರಿಗೆ ಸಾಗಿಸಲು ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ನೆರವಾಗಿದ್ದಾರೆ.
ಅಸೈಗೋಳಿಯ ಕೆಎಸ್‌ಆರ್‌ಪಿಯಲ್ಲಿ ಕ್ಲೀನಿಂಗ್ ಕಾರ್ಯನಿರ್ವಹಿಸುತ್ತಿದ್ದ ಕಾರವಾರ ಮೂಲದ ವಿದ್ಯಾ ವಿಕ್ರಮ್ ಅಂಬಿಗ್ (33) ಎಂಬವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮೃತದೇಹವನ್ನು ಊರಿಗೆ ಸಾಗಿಸಲು ಕಷ್ಟಪಟ್ಟು ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬದ ವಿಚಾರವನ್ನು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಅವರು ವಿಧಾನಸಭಾಧ್ಯಕ್ಷರಲ್ಲಿ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವರು ಕಟ್ಟಿದ್ದ ಹಣವನ್ನು ವಾಪಾಸು ಸಿಗುವಂತೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾರವಾರಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಮೂಲಕ ಸಹಕರಿಸಿದ್ದಾರೆ.
ಮೃತ ಮಹಿಳೆಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮೃತ ಮಹಿಳೆಯ ಕುಟುಂಬದ ಅತಂತ್ರ ಸ್ಥಿತಿಯ ಬಗ್ಗೆ ಯು.ಟಿ. ಖಾದರ್ ಅವರಲ್ಲಿ ತಿಳಿಸಿದ್ದೆ. ಕೂಡಲೇ ಅವರು ಸ್ಪಂದಿಸಿ ಮೃತ ಕುಟುಂಬಕ್ಕೆ ನೆರವಾಗಿದ್ದಾರೆ ಎಂದು ನಝರ್ ಷಾ ಪ್ರತಿಕ್ರಿಯಿಸಿದ್ದಾರೆ.