ಹೊಯ್ಸಳ ಶಾಸನ ಪತ್ತೆ

ಹೊಯ್ಸಳ ಶಾಸನ ಪತ್ತೆ


ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದ ಶಿವದೇವಾಲಯದ ಹೊರ ಆವರಣದಲ್ಲಿ ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ.

ಅರಸೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಅವರು ಪತ್ತೆ ಮಾಡಿ, ಶಾಸನದ ಅಧ್ಯಯನಕ್ಕಾಗಿ ನನ್ನ ಗಮನಕ್ಕೆ ತಂದರು. ಶಾಸನವನ್ನು 13ನೇ ಶತಮಾನದ ಹೊಯ್ಸಳ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ ರಚಿಸಲಾಗಿದೆ. ಐದು ಸಾಲಿನ ಈ ಪುಟ್ಟ ಶಾಸನದ ಬರವಣಿಗೆಯ ಶೈಲಿ ಹೊಯ್ಸಳರ ಕಾಲದ ಲಿಪಿ ಲಕ್ಷಣವನ್ನು ಹೊಂದಿದ್ದರೂ ಅಕ್ಷರ ಸ್ಖಾಲಿತ್ಯಗಳಿವೆ ಎಂದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸನದ ಪಠ್ಯದಲ್ಲಿ ಸುಭಾನು ಸಂವತ್ಸರದ ವೈಶಾಖ, ಬಹುಳ ಬ್ರಹವಾರದಂದು ಭಂ, ಟಾರನ ಹಕ್ಷಯ ಕೈಯಾಣ 1, ಕಂಗಾಣದಲ್ಲಿ ವಿಸುದೀ ಕಾಚಯ ನಾಯ, ಕ ಬಿಠ ಧರ್ಮ ಶಾಸನೋಕ್ತ ಕಾಲದ ವಿವರಗಳು, 6ನೇ ತಾರೀಕು ಏಪ್ರಿಲ್ 1223 ರ ಗುರುವಾರಕ್ಕೆ ಸರಿಹೊಂದುತ್ತದೆ.

ಲಿಪಿ ಲಕ್ಷಣಗಳೂ ಸರಿಸುಮಾರು ಇದೇ ಕಾಲಕ್ಕೆ ಅನ್ವಯವಾಗುತ್ತವೆ. ಶಾಸನದಲ್ಲಿ ಬೃಹಸ್ಪತಿವಾರ ಎಂಬುದನ್ನು ಬ್ರಹವಾರವೆಂದು, ಅಕ್ಷಯ ಎಂಬುದನ್ನು ಹಕ್ಷಯ ಎಂದೂ, ಬಿಟ್ಟ ಎನ್ನುವುದನ್ನು ಬಿಠ ಎಂದು ಬರೆಯಲಾಗಿದೆ.

ಶಾಸನದ ಮಹತ್ವ:

ಅರಸೀಕೆರೆ, ಹೊಯ್ಸಳ ರಾಜ್ಯದ ಹೃದಯ ಭಾಗವಾಗಿದ್ದು, ಹೊಯ್ಸಳರ ಕಾಲದ ಅಸಂಖ್ಯಾತ ಶಾಸನ, ವಾಸ್ತುಶಿಲ್ಪ, ಕೆರೆ-ಕಟ್ಟೆಗಳ ತವರೂರಾಗಿದೆ. ಪ್ರಸ್ತುತ ಶಾಸನದ ಮೇಲ್ಭಾಗದ ಪಟ್ಟಿಕೆಯಲ್ಲಿ ಶಿವಲಿಂಗವಿದೆ, ಲಿಂಗದ ಬಲಭಾಗದಲ್ಲಿ ವ್ಯಕ್ತಿಯೋರ್ವ ಅಂಜಲೀಬದ್ಧನಾಗಿ ಕುಳಿತಿರುವಂತೆ, ಎಡಭಾಗದಲ್ಲಿ ಹಸುವನ್ನು ಚಿತ್ರಿಸಲಾಗಿದೆ.

ಕಾಚಯ ನಾಯಕ ಎಂಬ ಸ್ಥಳೀಯ ಅಧಿಕಾರಿ ವೈಶಾಖ ಬಹುಳದಂದು ಭಂಟಾರ ಎಂಬ ವ್ಯಕ್ತಿಗೆ ಮರಣೋತ್ತರವಾಗಿ ಅಕ್ಷಯ ಪುಣ್ಯ ಪ್ರಾಪ್ತಿ ಆಗಲಿಯೆಂದು ನೀಡಿದ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಭಂಟಾರ ಎಂಬುದು ಬಹುಶಃ ಭಟ್ಟಾರಕ ಎಂಬ ಪದದ ಪ್ರಕ್ಷಿಪ್ತ ರೂಪವಾಗಿರುವಂತಿದೆ. 

ಭಂಟಾರ ತಳಲೂರು ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಶಿವ ದೇವಾಲಯದ ಶೈವಯತಿ ಆಗಿದ್ದಿರಬಹುದು. ಬಹುಳದಲ್ಲಿ ಮಾಡಿದ ದಾನ ಬಹುತೇಕ ಮರಣೋತ್ತರ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ, ಈ ಶಾಸನವನ್ನು ಭಂಟಾರ ಅಥವಾ ಭಟ್ಟಾರಕ ಎಂಬ ಶೈವಯತಿಯ ಮರಣ ದಾಖಲೆಯೆಂದು ಪರಿಗಣಿಸಬಹುದಾಗಿದೆ. ಈ ಶಾಸನವನ್ನು ಅಧ್ಯಯನಕ್ಕೆ ಒದಗಿಸಿದ ಅರಸೀಕೆರೆಯ ಹರೀಶ್ ಅವರಿಗೆ ಅಭಾರಿಯಾಗಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article