ಕೆತ್ತಿಕಲ್ ಭೂ ಕುಸಿತ ಸ್ಥಳವನ್ನು ತಜ್ಞರಿಂದ ಪರಿಶೀಲನೆ
Thursday, August 8, 2024
ಮಂಗಳೂರು: ಭೂಕುಸಿತ ಭೀತಿಯಲ್ಲಿರುವ ವಾಮಂಜೂರು ಕೆತ್ತಿಕಲ್ಲು ಗುಡ್ಡದ ಬಗ್ಗೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ಇಬ್ಬರು ತಜ್ಞರು ಎರಡು ದಿನಗಳ ಅಧ್ಯಯನ ನಡೆಸಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಕೆ. ತಿಳಿಸಿದ್ದಾರೆ.
ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅವರು ತಜ್ಞರು ನಿನ್ನೆ ಆಗಮಿಸಿದ್ದರು. ಇವತ್ತು ತಾನು ಕೆತ್ತಿಕಲ್‌ಗೆ ತೆರಳಿ ಅವರ ಅಭಿಪ್ರಾಯ ಪಡೆದಿರುವುದಾಗಿ ತಿಳಿಸಿದ್ದಾರೆ.
ಕೆತ್ತಿಕಲ್‌ನಲ್ಲಿ ಅಪಾಯಕಾರಿ ಇರುವ ಜಾಗದ ಬಗ್ಗೆ ತಜ್ಞರು ತಮಗೆ ತೋರಿಸಿಕೊಟ್ಟಿದ್ದಾರೆ.ಗುಡ್ಡದಿಂದ ಹರಿಯುತ್ತಿರುವ ನೀರು ಒಂದೇ ಕಡೆಯಿಂದ ಹಾಯಿಸದಿದ್ದರೆ , ಕುಸಿಯುವ ಭೀತಿ ಇದೆ ಎಂಬ ವಿಚಾರವನ್ನು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ತಕ್ಷಣ ಅಗತ್ಯದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಡ್ರೋಣ್ ಸರ್ವೆ ಮತ್ತು ಡಾಟಾ ಸಂಗ್ರಹಕ್ಕೆ ದಿಲ್ಲಿ ತಂಡದ ತಜ್ಞರನ್ನು ಸಂಪರ್ಕಿಸಿರುವುದಾಗಿ ತಿಳಿಸಿರುವ ಜಿಲ್ಲಾಧಿಕಾರಿ ಅವರು ಕೆತ್ತಿಕಲ್ನಲ್ಲಿ ಹಿಂದೆ ಏನಾಗಿದೆ ಎನ್ನುವುದನ್ನು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಕೆತ್ತಿಕಲ್ ಗುಡ್ಡದ ಬಳಿ ಇರುವ ಮನೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.