ಯಕ್ಷತೀರ್ಥ ಕಲಾಸೇವೆ-2024ರ ‘ಯಕ್ಷತೀರ್ಥ ಪೋಷಕ, ಸಂಘಟಕ ಪ್ರಶಸ್ತಿ’ ಪ್ರದಾನ

ಯಕ್ಷತೀರ್ಥ ಕಲಾಸೇವೆ-2024ರ ‘ಯಕ್ಷತೀರ್ಥ ಪೋಷಕ, ಸಂಘಟಕ ಪ್ರಶಸ್ತಿ’ ಪ್ರದಾನ


ಮೂಡುಬಿದಿರೆ: ಸದಾನಂದ ಆಚಾರ್ಯ ನೂರಾಳ್ ಬೆಟ್ಟು ಅವರ ನೇತೃತ್ವದ ಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು ಇದರ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ‘ಯಕ್ಷತೀರ್ಥ ಪೋಷಕ ಪ್ರಶಸ್ತಿ’ಯನ್ನು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣತಂತ್ರಿ ಅವರಿಗೂ, ‘ಯಕ್ಷತೀರ್ಥ ಸಂಘಟಕ  ಪ್ರಶಸ್ತಿ’ಯನ್ನು ಯಕ್ಷಗಾನ ವಿಮರ್ಶಕ, ಲೇಖಕ, ಹವ್ಯಾಸಿ ಕಲಾವಿದ ಹಾಗೂ ಸಂಘಟಕ ಎಂ. ಶಾಂತರಾಮ ಕುಡ್ವ ಅವರಿಗೆ ನೀಡಿ ಸಂಮಾನಿಸಲಾಯಿತು. 

ಡಾ. ಪ್ರಸಾದ್ ಬಿ. ಶೆಟ್ಟಿ ಹೊಸ್ಮಾರರ ಸಭಾಧ್ಯಕ್ಷತೆ ವಹಿಸಿದ್ದರು.

ಮೂಡುಬಿದಿರೆ ಜೈನ ಮಠದ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಹಿಂದಿನ ಯುಗದ ರಕ್ಕಸರು ಮೊದಲು ರಕ್ಕಸರಾದರೂ ನಂತರ ಅವರಿಗೆ ತಮ್ಮ ತಪ್ಪಿನ ಅರಿವಾಗಿ ದೇವರಲ್ಲಿ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಿದ್ದರು. ಅವರಿಗೆ ಕೊನೆಗಾದರೂ ಜ್ಞಾನೋದಯವಾಗುತಿತ್ತು. ಆದರೆ ಈಗಿನ ರಾಕ್ಕಸರು ಹಾಗಲ್ಲ, ಎಲ್ಲರಿಗೂ ಉಪದ್ರವ ತೊಂದರೆ ನೀಡುತ್ತಾ ತ್ರಿಶಂಕು ಸ್ಥಿತಿಗೆ ನಮ್ಮನ್ನು ನಿಲ್ಲಿಸುವಂತೆ ಮಾಡುವ ಕ್ರೂರಿಗಳು. ಲೌಕಿಕ ಜೀವನದ ಇಂದ್ರಿಯ ಸುಖಗಳು ನಮ್ಮನ್ನು ವಿಚಲಿತಗೊಳಿಸಿ ಮುಕ್ತಿಯ ದಾರಿಯನ್ನು ತಪ್ಪಿಸುತ್ತದೆ. ಇದನ್ನು ಮೀರಿ ಸಾಧನೆ ಮಾಡುವುದೇ ಜೀವನ್ಮುಕ್ತಿಯ ಪಥ. ದೇವಸ್ಥಾನದ ತಂತ್ರಿ ಕೃಷ್ಣ ತಂತ್ರಿಯಾದರೆ ಶಾಂತರಾಮ ಕುಡ್ವರು ಯಕ್ಷಗಾನದ ತಂತ್ರಗಾರಿಕೆಯ ನಿಪುಣರು. ಇವರಿಬ್ಬರನ್ನೂ ಸಂಮಾನಿಸಿದ ಸದಾನಂದ ಆಚಾರ್ಯ ನೂರಾಳ್ ಬೆಟ್ಟುರವರ ಸಾರಥ್ಯದ ಯಕ್ಷತೀರ್ಥ ಸಂಘಟನೆಯು ಅಭಿನಂದನಾರ್ಹ ಎಂದು ನುಡಿದರು.

ಸಂಮಾನಕ್ಕೆ ಉತ್ತರಿದ ಶಾಂತರಾಮ ಕುಡ್ವ ಅವರು, ಯಾವುದೇ ಕಲೆಯ ಪ್ರದರ್ಶನಕ್ಕೆ ಕಲಾವಿದರು, ಕಲಾಸಂಘಟಕರು, ಕಲಾ ಪೋಷಕರು ಹಾಗೂ ಕಲಾ ಪ್ರೇಕ್ಷಕರು ಎಂಬ ನಾಲ್ಕು ಅಂಗಗಳು ಪ್ರಮುಖ. ಇದರಲ್ಲಿ ಒಂದು ಅಂಗವಿಲ್ಲದಿದ್ದರೂ, ಪ್ರದರ್ಶನ ನೀಡಲು ಅಸಾಧ್ಯ. ಈ ನಿಟ್ಟಿನಲ್ಲಿ ಸಂಘಟಕರನ್ನೂ ಗುರುತಿಸಿ ಸಂಮಾನ ನೀಡಿದ ಯಕ್ಷತೀರ್ಥ ಸಂಘಟನೆಯು ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ನಾರಾವಿ ಬಸದಿಯ ಧರ್ಮಶ್ರೀ ಸಭಾ ಭವನದಲ್ಲಿ ದಿ. ಡಾ. ಕುಕ್ಕುಂದೂರು ಮಂಜುನಾಥ ಕಾಮತ್ ವೇದಿಕೆಯಲ್ಲಿ ಜರುಗಿದ ಈ ಕಾರ್ಯಕ್ರಮಲ್ಲಿ ಡಾ. ಪ್ರಸಾದ್ ಶೆಟ್ಟಿ ಅವರು ಮಂಜುನಾಥ ಕಾಮತರ ಸಂಸ್ಮರಣೆಯನ್ನೂ, ಯಕ್ಷಗಾನ ಪೋಷಕರಾದ ಉಪ್ಪರ ಜಯರಾಜ ಕಾಡ, ಕುತ್ಲೂರರ ಸಂಸ್ಮರಣೆಯನ್ನು ಅಜಿತ್ ಕೊಕ್ರಾಡಿಯವರೂ ನೆರವೇರಿಸಿದರು. 

ಪ್ರೇಮ್ ಕುಮಾರ್ ಜೈನ್, ಬಿ. ನಿರಂಜನ್ ಅಜ್ರಿ, ಸುಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಗಣೇಶ್ ಆಚಾರ್ಯ, ವಾಮನ ಆಚಾರ್ಯ, ವಸಂತ ಧನಲಕ್ಷ್ಮಿ ನಾರಾವಿ, ರಾಜವರ್ಮ ಜೈನ್, ಯಕ್ಷತೀರ್ಥದ ಸದಾನಂದ ಆಚಾರ್ಯ ನೂರಾಳ್ ಬೆಟ್ಟು ಉಪಸ್ಥಿತರಿದ್ದರು. 

ಬಿ.ಎಸ್. ಪುರಂದರ ಪುರೋಹಿತರು ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಪುರೋಹಿತ್ ವಂದಿಸಿದರು.

ಪ್ರಾರಂಭದಲ್ಲಿ ಸುಪ್ರಸಿದ್ಧ ಕಲಾವಿದರಿಂದ ‘ಶ್ರೀಕೃಷ್ಣ ಸಂಧಾನ’ ತಾಳಮದ್ದಳೆ, ನಂತರ ‘ಹಾಸ್ಯ ತೆಲಿಕೆ’ ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article