ಅತಿಥಿ ಶಿಕ್ಷಕರ ಪಟ್ಟಿಗೆ ತುಳು ಬೋಧಕರು
ಉಡುಪಿ: ಅವಿಭಜಿತ ದಕ ಜಿಲ್ಲೆಯ 40 ಶಾಲೆಗಳಲ್ಲಿ ತುಳು ಕಲಿಸುತ್ತಿರುವ ಶಿಕ್ಷಕರನ್ನೂ ಉರ್ದು, ಫ್ರೆಂಚ್ ಮತ್ತಿತರ ಭಾಷಾ ಶಿಕ್ಷಕರಂತೆ ಅತಿಥಿ ಶಿಕ್ಷಕರ ಪಟ್ಟಿಗೆ ಸೇರಿಸಿ ಗೌರವಧನ ನೀಡಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಉಡುಪಿ ತುಳುಕೂಟ ಆಶ್ರಯದಲ್ಲಿ ಭಾನುವಾರ ನಡೆದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ‍್ಯಕ್ರಮದ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ಪ್ರಸ್ತುತ ತುಳು ಶಿಕ್ಷಕರಿಗೆ ತುಳು ಅಕಾಡೆಮಿಯಿಂದಲೇ ಗೌರವಧನ ನೀಡಲಾಗುತ್ತಿದೆ. ಅವರ ಬಾಕಿ 12.50 ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ತುಳು ಭಾಷೆಗೆ ಮುಂದಿನ ಅಧಿವೇಶನದಲ್ಲಿ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ಲಭಿಸುವ ನಿರೀಕ್ಷೆ ಇದೆ. ಜೊತೆಗೆ ತುಳು ಭಾಷೆಯನ್ನು ಯೂನಿಕೋಡ್‌ನಲ್ಲಿ ಬಳಸುವ ವ್ಯವಸ್ಥೆಯೂ ಆಗುತ್ತಿದೆ ಎಂದರು.
ತುಳು ಭಾಷೆಗಾಗಿ ಹೋರಾಟ ನಡೆಸಿದ್ದ ಯು.ಎಸ್. ಪಣಿಯಾಡಿ ಅವರನ್ನು ಸರ್ಕಾರಿ ಮಟ್ಟದಲ್ಲಿ ಪ್ರಶಸ್ತಿ, ದತ್ತಿನಿಧಿ, ಪೀಠ ಇತ್ಯಾದಿಗಳ ಮೂಲಕ ಗುರುತಿಸಬೇಕಾಗಿದೆ. ಈ ಬಗ್ಗೆ ಅಕಾಡೆಮಿಯಲ್ಲಿಯೂ ಯೋಚಿಸಲಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಅವರು ಪಣಿಯಾಡಿ ಕಾದಂಬರಿ ಪ್ರಶಸ್ತಿ ವಿಜೇತ ’ಪಮ್ಮಕ್ಕೆನ ಪೊರುಂಬಾಟ’ ಕಾದಂಬರಿ ಬಿಡುಗಡೆಗೊಳಿಸಿದರು. ಸಾಹಿತಿ ಅಮಿತಾಂಜಲಿ ಕಿರಣ್ ಕೃತಿ ಪರಿಚಯಿಸಿದರು.
ಮಂಗಳೂರಿನ ತುಳು ಸಾಹಿತಿ ರೂಪಕಲಾ ಆಳ್ವ ಅವರಿಗೆ ಈ ಸಾಲಿನ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತುಳುಪಠ್ಯದಲ್ಲಿ ಶೇ.100 ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತೀರ್ಪುಗಾರರಾದ ವಿಮರ್ಶಕ ಪ್ರೊ. ಮುರಳಿಧರ ಉಪಾಧ್ಯಾಯ ಹಿರಿಯಡ್ಕ ಮತ್ತು ಸಾಹಿತಿ ಪುತ್ತಿಗೆ ಪದ್ಮನಾಭ ರೈ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಸಂಗೀತ ನಿರ್ದೇಶಕ ವಿ. ಮನೋಹರ್, ಉದ್ಯಮಿ ವೈ. ಸುಧೀರ್ ಕುಮಾರ್, ದಾನಿ ಯು. ವಿಶ್ವನಾಥ ಆಗಮಿಸಿದ್ದರು. ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ವೇದಿಕೆಯಲ್ಲಿದ್ದರು. ಪ್ರಶಸ್ತಿ ಸಮಿತಿ ಸಂಚಾಲಕ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿ, ರತ್ನಾಕರ ಇಂದ್ರಾಳಿ ನಿರೂಪಿಸಿದರು.