ಪ್ರವಾಹದಂತಹ ದುರ್ಘಟನೆ ಎಲ್ಲೂ ಮರಕಳಿಸದಿರಲಿ: ಮೋಹನ್ ಕುಮಾರ್

ಪ್ರವಾಹದಂತಹ ದುರ್ಘಟನೆ ಎಲ್ಲೂ ಮರಕಳಿಸದಿರಲಿ: ಮೋಹನ್ ಕುಮಾರ್


ಉಜಿರೆ: ಐದು ವರ್ಷಗಳ ಹಿಂದಿನ ಅನಿರೀಕ್ಷಿತ ಪ್ರವಾಹದಿಂದ ತತ್ತರಿಸಿದ್ದ  ಬೆಳ್ತಂಗಡಿ ತಾಲೂಕಿನ ಗ್ರಾಮಾಂತರ ಕೊಳಂಬೆ ಪ್ರದೇಶದ ಜನರು ಇಂದು ಕಹಿ ಘಟನೆ ಮರೆತು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ. ಇಂತಹ ದುರ್ಘಟನೆ ಎಲ್ಲೂ  ಮರಕಳಿಸದಿರಲಿ. ಅಂದಿನ ಕಹಿ ಘಟನೆಗಳನ್ನು ಮರೆತು ಭವಿಷ್ಯದ ಸುಂದರ ಬದುಕನ್ನು ಮುಂದುವರಿಸೋಣ ಎಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು. 

ಅವರು ಆ.8 ರಂದು ಬೆಳ್ತಂಗಡಿ ತಾಲೂಕಿನ  ಚಾರ್ಮಾಡಿ ಬಳಿಯ ಕೊಳಂಬೆಯಲ್ಲಿ 5 ವರ್ಷಗಳ ಹಿಂದೆ ಆಗಸ್ಟ್ 9ರಂದು ಭೀಕರ ಪ್ರವಾಹದಿಂದ ಮನೆ ಮಾರು ಕಳೆದುಕೊಂಡು ದಿಕ್ಕು  ತೋಚದಂತಾದಾಗ ಮರು ಸೃಷ್ಟಿಯಿಂದ ಬದುಕಿನಲ್ಲಿ ಭರವಸೆ  ಮೂಡಿಸಿದಾಗ ಮೃತ್ಯುಂಜಯ ನದಿಗೆ ಹಾಲೆರೆಯುವ ಹಾಗೂ ವಯನಾಡು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಅಂದು ಇಲ್ಲಿಯ ಪ್ರವಾಹ ಸಂತ್ರಸ್ತ  ಜನ ಮನೆ ಮಾರು ಕಳೆದುಕೊಂಡು  ಊರನ್ನು ತೊರೆಯಲು ಮುಂದಾಗಿದ್ದರು. ಆದರೆ ಅವರ ಮನವೊಲಿಸಿ ಇಲ್ಲಿಯೇ ನೆಲೆಸುವಂತೆ ಪುನರ್ನಿರ್ಮಾಣ ಕಾರ್ಯ ಮಾಡಲಾಗಿದೆ. 12 ಮನೆಗಳನ್ನು ನಿರ್ಮಿಸಿ ಕೊಡುವಲ್ಲಿ 1,500 ಅಡಕೆ ಗಿಡ ನೆಡಲು, ಗದ್ದೆಗಳ ಹೂಳು  ತೆರವು  ಸಹಿತ ಅನೇಕ ಕಾರ್ಯಗಳಲ್ಲಿ ಬದುಕು ಕಟ್ಟೋಣ ಬನ್ನಿ ತಂಡ  ಇತರ ಸೇವಾ ಸಂಘಟನೆಗಳ ಜತೆ ಕೈಜೋಡಿಸಿದೆ. ಮುಂದೆ ನಮ್ಮ ತಂಡದ  ಸೇವಾ ಕಾರ್ಯವನ್ನು ಇನ್ನಷ್ಟು ವಿಸ್ತರಿಸುವ ಕನಸು ಹೊತ್ತಿದ್ದೇವೆ ಎಂದರು. 

ಅಂದಿನ ಪ್ರವಾಹದಲ್ಲಿ  ಸರ್ವವನ್ನೂ ಕಳೆ ದುಕೊಂಡ  ಸಂತ್ರಸ್ತೆ ಯಶೋದಾ ಮಾತನಾಡಿ ಕೊಳಂಬೆಯ ಸಮಗ್ರ ಅಭಿವೃದ್ಧಿಯಲ್ಲಿ ಬದುಕು ಕಟ್ಟೋಣ ತಂಡದ ಪಾತ್ರ ಹಿರಿದಾಗಿದೆ. ಇಲ್ಲಿಯ  ಜನರು  ಇಲ್ಲೇ  ಜೀವನ  ಮರು  ರೂಪಿಸಲು ಪಣತೊಟ್ಟು ಕೆಲಸ ಮಾಡಿದ ತಂಡಕ್ಕೆ ನಾವು ಆಭಾರಿಗಳಾಗಿದ್ದೇವೆ. ಇವರ ಸೇವೆ ರಾಜ್ಯವೇ ಗುರುತಿಸುವಂತಹ ಕೆಲಸ ಮಾಡಿದೆ. ಪ್ರವಾಹದಿಂದ ನಿರ್ಗತಿಕರಾಗಿದ್ದ ನಾವು ಮತ್ತೆ ಹಿಂದಿನ ಸ್ಥಿತಿಗೆ ಮರಳಿದ್ದೇವೆ ಎಂದರೆ ಅದಕ್ಕೆ ಈ ತಂಡವೇ ಕಾರಣ  ಎಂದು ಧನ್ಯತೆಯಿಂದ ಸ್ಮರಿಸಿಕೊಂಡರು. ಉಜಿರೆ ಎಸ್ ಡಿ ಎಂ ಕಾಲೇಜಿನ ಎನ್ನೆಸ್ಸೆಸ್  ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ ಮಾತನಾಡಿ ಪ್ರಕೃತಿ ಎದುರು ಮಾನವ ಕುಬ್ಜ.ಪ್ರಕೃತಿಯಿಂದ ಆದ ಹಾನಿಯನ್ನು  ಮಾನವ ಮರು ಸೃಷ್ಟಿಸಬಹುದು. ಆದರೆ ಆಪತ್ಕಾಲದಲ್ಲಿ ಸಹಾಯ ನೀಡಿದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದದ್ದು ಮುಖ್ಯ. ಇದನ್ನು  ಮುಂದಿನ ಪೀಳಿಗೆಯೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು. ಇಂತಹ ದುರ್ಘಟನೆ ಮತ್ತೆಂದೂ ಬಾರದಿರಲಿ ಎಂದರು. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಮಾತನಾಡಿ  ಅನಿರೀಕ್ಷಿತ ದುರಂತದ ಘಟನೆಯನ್ನು   ಮಾಧ್ಯಮ ಮಿತ್ರರೂ  ವಸ್ತುನಿಷ್ಠ  ವರದಿಯನ್ನು ಜನತೆಗೆ  ತಲುಪಿಸುವ ಕಾರ್ಯದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದರು.  ಬದುಕು ಕಟ್ಟೋಣ ಬನ್ನಿ ತಂಡದ  ಸಂಚಾಲಕ ರಾಜೇಶ್ ಪೈ, ತಾ ಪಂ ಮಾಜಿ ಸದಸ್ಯ ಶಶಿಧರ ಕಲ್ಮಂಜ,ಕೊಳಂಬೆ ಪರಿಸರದ ನಾಗರಿಕರು ಉಪಸ್ಥಿತರಿದ್ದರು. 

ಕಿರಣ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು. 

 ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಉಜಿರೆ  ಎಸ್ ಡಿ ಎಂ ಸ್ವಾಯತ್ತ ಕಾಲೇಜಿನ ಎನ್ನೆಸ್ಸೆಸ್ ವಿಭಾಗದ  ಸ್ವಯಂಸೇವಕರು   ಕಾರ್ಯಕ್ರಮದಲ್ಲಿ   ಭಾಗವಹಿಸಿದ್ದರು. ವಯನಾಡು ದುರಂತದಲ್ಲಿ ಮಡಿದ  ಆತ್ಮಗಳಿಗೆ ಮೌನ ಪ್ರಾರ್ಥನೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article