ಕಾಂಗ್ರೆಸ್ ತೆಕ್ಕೆಗೆ ಉಳ್ಳಾಲ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

ಕಾಂಗ್ರೆಸ್ ತೆಕ್ಕೆಗೆ ಉಳ್ಳಾಲ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ


ಉಳ್ಳಾಲ: ಉಳ್ಳಾಲ ನಗರಸಭೆಯ ಕಾಂಗ್ರೆಸ್ ಆಡಳಿತದ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಕಾಂಗ್ರೆಸಿನ ಶಶಿಕಲಾ, ಉಪಾಧ್ಯಕ್ಷೆಯಾಗಿ ಸಪ್ನ ಹರೀಶ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಜತೆ ಎಸ್‌ಡಿಪಿಐ ಪಕ್ಷದ ನಗರ ಸದಸ್ಯರು ಕೈ ಮಿಲಾಯಿಸಿದ್ದಾರೆ.

ಉಳ್ಳಾಲ ನಗರ ಸಭೆಯ ಎರಡನೇ ಆಡಳಿತಾವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರದಂದು ನಗರಸಭೆಯ ಸಭಾಂಗಣದಲ್ಲಿ ನಗರ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್‌ನ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ಆಯ್ಕೆಯಾದರು.ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ)ದ ಮಹಿಳೆಗೆ ಮೀಸಲಿರಿಸಲಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಶಶಿಕಲಾ, ಬಿಜೆಪಿಯಿಂದ ಭವಾನಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಸಪ್ನ ಹರೀಶ್, ಬಿಜೆಪಿಯಿಂದ ನಮಿತ ಗಟ್ಟಿ, ಎಸ್‌ಡಿಪಿಐಯಿಂದ ಝರೀನ ರವೂಫ್ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಶಶಿಕಲಾ ಪರ 23 ಮತಗಳು, ಬಿಜೆಪಿಯ ಭವಾನಿ ಪರ 6 ಮತಗಳು ಚಲಾವಣೆ ಆಗಿದ್ದು, ಇಬ್ಬರು ನಗರ ಸಭೆ ಸದಸ್ಯರಾದ  ಬಶೀರ್ ಹಾಗೂ ದಿನಕರ್ ಉಳ್ಳಾಲ ಮತ ಚಲಾಯಿಸದೆ ತಟಸ್ಥರಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಸಪ್ನಾ ಹರೀಶ್ ಪರ 17 ಮತಗಳು, ಎಸ್‌ಡಿಪಿಐಯ ಝರೀನ ರವೂಫ್ ಪರ 6, ಬಿಜೆಪಿಯ ನಮಿತ ಗಟ್ಟಿಯ ಪರ 6 ಮತಗಳು ಚಲಾವಣೆ ಆದವು. ಇಬ್ಬರು ನಗರ ಸಭೆ ಸದಸ್ಯರು ತಟಸ್ಥರಾದರು.

23 ಮತ ಪಡೆದ ಶಶಿಕಲಾ ಅಧ್ಯಕ್ಷರಾಗಿ, 17 ಮತಗಳನ್ನು ಪಡೆದ ಕಾಂಗ್ರೆಸ್‌ನ ಸಪ್ನ ಹರೀಶ್ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಸಹಾಯಕ ಆಯುಕ್ತ ಹರ್ಷವರ್ಧನ್ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ನಗರ ಸಭೆಯ ನೂತನ ಉಪಾಧ್ಯಕ್ಷೆ ಸಪ್ನ ಹರೀಶ್ ಮಾತನಾಡಿ, ಪಕ್ಷ, ಜಾತಿ, ಮತ ಭೇದವಿಲ್ಲದೆ ಸಿಕ್ಕ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗದೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸುತ್ತೇನೆ. ನಗರ ವ್ಯಾಪ್ತಿಯಲ್ಲಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದ್ದು ಅಧ್ಯಕ್ಷರೊಂದಿಗೆ ದುರಸ್ಥಿ, ಪರಿಹಾರ ಕಾರ್ಯಗಳನ್ನು ನಡೆಸಬೇಕಿದೆ. ನಗರ ಸಭೆಯ ಸದಸ್ಯರೆಲ್ಲರೂ ಒಂದು ಕುಟುಂಬವಿದ್ದಂತೆ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಬೆಂಬಲ ಯಾಚಿಸಿದರು.

ಉಳ್ಳಾಲ ನಗರ ಸಭೆಯ ಒಟ್ಟು 31 ಸ್ಥಾನಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಎಸ್‌ಡಿಪಿಐ 6 ಹಾಗೂ ಇಬ್ಬರು ಪಕ್ಷೇತರರು ಸ್ಥಾನ ಪಡೆದಿದ್ದಾರೆ. ಈ ಪೈಕಿ ಜೆಡಿಎಸ್‌ನ ನಾಲ್ವರು ಸದಸ್ಯರ ಪೈಕಿ ಮೂವರು ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದು, ಇವರಲ್ಲಿ ಇಬ್ಬರು ಕಾಂಗ್ರೆಸ್‌ಗೆ ಸೇರಿದ್ದರು. ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಆಡಳಿತದ ಮೊದಲ ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ 2023 ಮೇ ತಿಂಗಳಲ್ಲಿ ಕೊನೆಗೊಂಡಿತ್ತು.

ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಕಾಂಗ್ರೆಸ್‌ನ ಹಿರಿಯ ಮುಖಂಡ ಇಬ್ರಾಹಿಂ ಕೋಡಿಜಾಲ್, ರಹ್ಮಾನ್ ಕೋಡಿಜಾಲ್, ಮಾಜಿ ಕೌನ್ಸಿಲರ್ ಮುಸ್ತಫಾ ಉಳ್ಳಾಲ, ಶೌಕತ್ ಕೊಣಾಜೆ, ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂ ಗುಚ್ಛ ನೀಡಿ ಶುಭ ಕೋರಿದರು.

ಎಸ್‌ಡಿಪಿಐ ಬೆಂಬಲ:

ನಗರಸಭೆಯ ಅಧ್ಯಕ್ಷಗಾದಿಗೆ ಸ್ಫರ್ಧಿಸಿದ್ದ ಶಶಿಕಲಾ ಪರ ಕಾಂಗ್ರೆಸ್ ಪಕ್ಷದ ನಗರ ಸದಸ್ಯರೊಂದಿಗೆ ಎಸ್‌ಡಿಪಿಐನ ಆರು ನಗರ ಸದಸ್ಯರು ಕೈ ಎತ್ತಿ ಮತ ಚಲಾಯಿಸಿದ್ದಾರೆ. ಉಳ್ಳಾಲ ನಗರಸಭೆಯ ಈ ಮೊದಲ ಅವಧಿಯ ಆಡಳಿತಾವಧಿಯಲ್ಲಿ ಎಸ್‌ಡಿಪಿಐನ ನಗರ ಸದಸ್ಯೆ ಝರೀನ ರವೂಫ್ ಅವರು ಕೈ ಪಕ್ಷದ ಕೌನ್ಸಿಲರ್‌ಗಳ ಬೆಂಬಲದಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article