ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ-ಶಿಕ್ಷಕ ಸುಪ್ತಶಕ್ತಿಯ ಪ್ರಕಾಶಕ: ಪ್ರತಾಪ್ ಸಿಂಹ ನಾಯಕ್
ಕಲ್ಲಬೆಟ್ಟು: ಕನಸುಕಾಣುವ ಹದಿಹರೆಯದಲ್ಲಿ ಗುರುವಿನ ಮಾರ್ಗದರ್ಶನದಿಂದ ಭವ್ಯಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಯೌವನ ಬರುವುದು ಅಂದಚಂದಕ್ಕಲ್ಲ ಬದಲಾಗಿ ಅಸಾಧ್ಯವಾಗಿದ್ದನ್ನು ಸಾಧಿಸಲು ಮನಸ್ಸಿನ ಕ್ಷಮತೆ ಬಲುದೊಡ್ಡದು. ನನ್ನಿಂದ ಸಾಧ್ಯ ಎಂಬ ಸಕಾರಾತ್ಮಕ ಚಿಂತನೆ ಅನೂಹ್ಯವಾದ ಕಾರ್ಯವನ್ನು ಮಾಡಿಸುತ್ತದೆ. ವಿದ್ಯಾರ್ಥಿಯ ಭವಿಷ್ಯದ ಕಾಳಜಿಯಿಂದ ಸುಪ್ತವಾಗಿರುವ ಶಕ್ತಿಯನ್ನು ಬೆಳಕಿಗೆ ತರುವುದು ಶಿಕ್ಷಕರ ಧರ್ಮ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಯು ಜಿಜ್ಞಾಸುವಾಗಿ ಗುರುವಿನಲ್ಲಿ ಶ್ರದ್ಧೆಯಿಟ್ಟು ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಅಧಿಕ ಉತ್ಸಾಹದಿಂದ ಅಧ್ಯಯನ ಮಾಡಿದಾಗ ಕನಸು ಸಾಕಾರಗೊಳ್ಳುತ್ತದೆ. ವಿದ್ಯಾರ್ಥಿಯ ಸಾಧನೆ, ವೃತ್ತಿ ಜೀವನದ ಯಶಸ್ಸು ಶಿಕ್ಷಕರಿಗೆ ಸಿಗುವ ನೈಜ ಸಮ್ಮಾನ. ಶಿಕ್ಷಕ ವೃತ್ತಿಯ ಅನುಭವದಿಂದಲೇವೆಕ್ಸಲೆಂಟ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಯುವರಾಜ ದಂಪತಿಗಳು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಶಿಕ್ಷಕರಿಗೆಲ್ಲ ಪ್ರೇರಣೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ನಿಶ್ಚಿತ ಗುರಿಯೆಡೆಗೆ ಸಾಗುವಲ್ಲಿ ಗುರುವಿನ ಪಾತ್ರ ಮಹತ್ತರವಾದದ್ದು. ಗುರುವಿನಿಂದ ಪಡೆಯುವ ಜ್ಞಾನದ ಜೊತೆಗೆ ಉತ್ತಮ ಮನೋಭಾವವನ್ನು ಹೊಂದಿ ಕೌಶಲವನ್ನು ಬೆಳೆಸಿಕೊಂಡರೆ ಅವಕಾಶದ ಹೆಬ್ಬಾಗಿಲು ತೆರೆಯುತ್ತದೆ. ನಮ್ಮ ಬದುಕಿನ ಶಿಲ್ಪಿಗಳಾದ ಶಿಕ್ಷಕರು, ಸಮಾಜದ ಗುರುಶಕ್ತಿಯಾಗಿದ್ದಾರೆ. ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ಅಗೋಚರವಾದ ತಾಳ್ಮೆ ತ್ಯಾಗ ಸ್ಮರಣೀಯವಾದದ್ದು. ಶಿಕ್ಷಣದ ಎಲ್ಲಾ ಹಂತಗಳಲ್ಲಿ ಜ್ಞಾನದ ಹಸಿವನ್ನು ನೀಗಿಸಿ ಬದುಕನ್ನು ಕಟ್ಟಿಕೊಟ್ಟ ಶಿಕ್ಷಕರ ನೆನಪು ಹಚ್ಚಹಸಿರಾಗಿರಬೇಕು. ಋಣಮುಕ್ತರಾಗಲು ಸಮಾಜಕ್ಕೆ ಕೊಡುಗೆ ಸಲ್ಲಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಾದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿಶ್ವನಾಥ ಪಿ., ಎಸ್.ಡಿ.ಎಂ. ಕಾಲೇಜಿನ ಪ್ರೊ. ಬಿ. ನಾಗೇಶ್ ನಾಯಕ್, ಕೆ. ವಸಂತರಾಜ್ ಜೈನ್, ಪ್ರೊ. ಶಾಂತಿ ಪ್ರಕಾಶ್, ಶಾಲಿನಿ, ತಾಕೊಡೆ ಅವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಗುರುವಂದನಾ ಭಾಷಣ ಮಾಡಿದರು.
ಕಳೆದ ವರ್ಷ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಅಣಿಗೊಳಿಸಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿವಿಧ ವಿಭಾಗಗಳ ಅಧ್ಯಾಪಕರನ್ನು ಆಡಳಿತ ಮಂಡಳಿಯು ಗೌರವಧನದೊಂದಿಗೆ ಪ್ರೋತ್ಸಾಹಿಸಿತು.
ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಪ್ರೊ. ಪುಷ್ಪರಾಜ್, ಎಕ್ಸಲೆಂಟ್ ಸಿಬಿಎಸ್ ಸಿ ಶಾಲೆಯ ಪ್ರಾಂಶುಪಾಲ ಸುರೇಶ್ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್ ಸೇರಿದಂತೆ ಸಾಧಕ ಶಿಕ್ಷಕರನ್ನು ಪರಿಚಯಿಸಿದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ವದಿಸಿದರು. ಅಧ್ಯಾಪಕರಾದ ಯಶಸ್ವಿನೀ, ವೆನೆಸ್ಸಾ ನೊರೋನ್ಹಾ ಕಾರ್ಯಕ್ರಮವನ್ನು ನಿರೂಪಿಸಿದರು.

