ಸಾಸ್ತಾನ ಮೀನು ಮಾರುಕಟ್ಟೆ ಅವ್ಯವಹಾರ ಆರೋಪ: ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ

ಸಾಸ್ತಾನ ಮೀನು ಮಾರುಕಟ್ಟೆ ಅವ್ಯವಹಾರ ಆರೋಪ: ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ


ಕುಂದಾಪುರ: ಬ್ರಹ್ಮಾವರ ತಾಲೂಕು ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಸಾಸ್ತಾನ ಮೀನುಮಾರುಕಟ್ಟೆ ಕಳಪೆ ಕಾಮಗಾರಿ ದೂರಿನ್ವಯ ಪರಿಶೀಲನೆಗಾಗಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು.

ಮೀನುಗಾರಿಕಾ ಇಲಾಖೆ ಮೂಲಕ ಎನ್‌ಎಫ್‌ಡಿವಿ ಹೈದರಾಬಾದ್, ನಬಾಡ್೯ ಇವರ ಅನುದಾನದಡಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮೀನು ಮಾರುಕಟ್ಟೆ ಕಾಮಗಾರಿಯಲ್ಲಿ ಲೋಪವೆಸಗಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಥೋಮಸ್ ರೊಡ್ರಿಗಸ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರನ್ವಯ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇದರ ಐ.ಓ. ಶುಭ ಟಿ. ವಿವಿಧ ಇಲಾಖೆಗಳ ಸಮ್ಮುಖದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದರು.

ಸಮಾರು 3 ಗಂಟೆಯವರೆಗೆ ಮೀನುಮಾರುಕಟ್ಟೆಯ ವಿವಿಧ ಭಾಗಗಳ, ಕಟ್ಟಡಗಳು ಹಾಗೂ ಅಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿದ ಅವರು ಸಂಬಂಧಿಸಿದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.

ಪ್ರಸ್ತುತ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಥೋಮಸ್ ರೊಡ್ರಿಗಸ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ಮನದಟ್ಟು ಮಾಡಿ ಕಟ್ಟಡ ಕಾಮಗಾರಿಯಲ್ಲಿ ಕಳಪೆ, ಅಲ್ಲಿನ ನಿರುಪಯುಕ್ತ ನೀರು ಹೋಗುವ ಕಾಲುವೆ, ಟಾಯ್ಲೆಟ್ ಸೇರಿದಂತೆ ವಿವಿಧ ಅಂಗಡಿ ಕೋಣೆಗಳ ಕಾಮಗಾರಿಗಳ ಹಾಗೂ ನಿರ್ವಹಣೆಯ ರೀತಿಯನ್ನು ಮನದಟ್ಟು ಮಾಡಿದರು.

ಎಲ್ಲವನ್ನೂ ವೀಕ್ಷಸಿ ಅಭಿಪ್ರಾಯ ಸಂಗ್ರಹಿಸಿದ ಲೋಕಾಯುಕ್ತ ಅಧಿಕಾರಿಗಳು ಸಾಸ್ತಾನ ಮೀನು ಮಾರುಕಟ್ಟೆ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಇಲ್ಲಿನ ಅವ್ಯವಸ್ಥೆಗಳು ಹಾಗೂ ನಿರ್ವಹಣೆ ಬಗ್ಗೆ ಪಂಚಾಯತ್ ಪಿಡಿಓ ಅನ್ನು ಪ್ರಶ್ನಿಸಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಮೀನುಗಾರಿಕಾ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಹಿಳಾ ಮೀನುಗಾರರ ಅಳಲು:

ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದ್ದಂತೆ ಅಲ್ಲಿನ ಪ್ರಸ್ತುತ ಮಹಿಳಾ ಮೀನುಗಾರರು ತಮ್ಮ ಅಳಲನ್ನು ತೊಡಿಕೊಂಡರು. ಒಣ ಮೀನು ಮಾರಾಟದ 19 ಮಳಿಗೆಗಳನ್ನು ಅವರಿಗೆ ನೀಡುವ ಬದಲು ಗ್ರಾಮ ಪಂಚಾಯತ್‌ನವರು ಏಲಂ ಮೂಲಕ ಖಾಸಗಿ ವ್ಯಾಪಾರಸ್ಥರಿಗೆ ಅಕ್ರಮವಾಗಿ ನೀಡಿದ್ದಾರೆ ಎಂದು ಒಣ ಮೀನುಮಾರಾಟಗಾರ ಮಹಿಳೆಯರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.  

ಪ್ರಸ್ತುತ ಸ್ಥಳ ಗ್ರಾಮಪಂಚಾಯತ್ ಮೀನುಗಾರಿಕಾ ಇಲಾಖೆಗೆ ದಾನ ಪತ್ರದ ಮೂಲಕ ನೀಡಲ್ಪಟ್ಟಿದೆ. 2 ಕೋಟಿ ರೂ. ಅನುದಾನವು ಮೀನು ಮಾರಾಟಕ್ಕಾಗಿಯೇ ನೀಡಿದ್ದು ಈ ಕಟ್ಟಡವು ನಮಗೆ ಸೇರಿದರೂ ನಮಗೆ ವ್ಯಾಪಾರಕ್ಕಾಗಿ ನೀಡಿಲ್ಲ. ಕಟ್ಟಡದ ನೀಲನಕ್ಷೆಯಲ್ಲಿ 200 ಮಹಿಳಾ ಮಾರಾಟಗಾರರು ಕೂರುವ ವ್ಯವಸ್ಥೆ ಎಂದು ತೋರಿಸಲಾಗಿದ್ದು, ಇಲ್ಲಿ ಪ್ರಸ್ತುತ ೬೪ ಜನ ಮಾರಾಟಗಾರರು ಮಾತ್ರ ಕುಳಿತುಕೊಳ್ಳಲು ಯೋಗ್ಯವಾಗಿದೆ. ಅಸಮರ್ಪಕ ಕಾಮಗಾರಿಯಿಂದ ಮಾರುಕಟ್ಟೆಯ ಪ್ರತಿ ವ್ಯವಸ್ಥೆಯೂ ಅವ್ಯವಸ್ಥೆಯ ಕೂಪವಾಗಿದೆ. ನಮಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಕೊಳೆತು ನಾರುವ ಡ್ರೈನೇಜ್, ಟ್ಯಾಂಕ್, ಟಾಯ್ಲೆಟ್ ವಿಕ್ಷೀಸಿದ ಅಧಿಕಾರಿಗಳು ಖೇದ ವ್ಯಕ್ತಪಡಿಸಿದರು.

ಇಲ್ಲಿನ ಮಾರುಕಟ್ಟೆಯ ಹಿಂಭಾಗದಲ್ಲಿರುವ ಮೀನಿನ ನಿರುಪಯುಕ್ತ ನೀರಿನ ಟ್ಯಾಂಕ್ ತೆರೆಯುತ್ತಿದ್ದಂತೆ ಗಬ್ಬು ನಾರುವ ಸ್ಥಿತಿ ಕಂಡು ಅಧಿಕಾರಿಗಳು ತೀವ್ರ ಅಸಾಮಾಧಾನಗೊಂಡರು. ಈ ರೀತಿಯ ಕಾಮಗಾರಿಗಳ ಬಗ್ಗೆ ನಿರ್ಮಿತಿ ಕೇಂದ್ರದ ವಿರುದ್ಧ ಬೇಸರ ಹೊರಹಾಕಿ ಲೋಪಗಳ ಪಟ್ಟಿಮಾಡಿಕೊಂಡರು.

ಸುಂಕ ನೀಡಲು ವಿರೋಧ:

ಮೀನುಮಾರುಕಟ್ಟೆಯಲ್ಲಿ ಐರೋಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿ ಮಹಿಳಾ ಮೀನುಗಾರರು ಪ್ರಸ್ತುತ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ನಮಗೆ ಮಾರುಕಟ್ಟೆಯಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಿ, ಇಲ್ಲವಾದಲ್ಲಿ ನಾವು ಮಾರುಕಟ್ಟೆ ಸುಂಕ ನೀಡುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ಅಭಿವೃದ್ಧಿ ಅಧಿಕಾರಿ ಮಾತನಾಡಿ, ನಾವೇನು ಪಂಚಾಯತ್ ಪ್ರತಿನಿಧಿಗಳಲ್ಲ. ಬದಲಾಗಿ ನಾನು ಬರುವುದಕ್ಕಿಂತ ಹಿಂದೆಯೇ ಈ ನಿಯಮ ಮಾಡಲಾಗಿದೆ. ಪ್ರಸ್ತುತ ಸುಂಕ ಕಟ್ಟಲೇ ಬೇಕು ಎಂದರು. ಮಹಿಳಾ ಮೀನುಗಾರರು ಸುಂಕ ಕಟ್ಟಲ್ಲ ಎಂದು ಆಕ್ರೋಶ ಹೊರ ಹಾಕಿದರು.

ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್, ಕೆಎಫ್‌ಡಿಸಿ ಮಂಗಳೂರು ಇದರ ಸಿನಿಯರ್ ಮ್ಯಾನೇಜರ್ ಮಲ್ಲೇಶ್, ಪ್ರಾಜೆಕ್ಟ್ ಇಂಜಿನಿಯರ್ ಮನೋಹರ್, ಲೋಕೋಪಯೋಗಿ ಪರಿಶೀಲನಾ ಇಂಜಿನಿಯರ್ ಸಮ್ರಾಟ್ ಗೌಡ, ಐರೋಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article