ಅಂಬೇಡ್ಕರ್ ಸರ್ಕಲ್' ಕಾಮಗಾರಿ ಶೀಘ್ರ ಆರಂಭಕ್ಕೆ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಒಕ್ಕೂಟ ಆಗ್ರಹ
ಮಂಗಳೂರು: ಅಂಬೇಡ್ಕರ್ ಪ್ರತಿಮೆ ಸಹಿತ ಸರ್ಕಲ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮೂಡ ಮಾಜಿ ಅಧ್ಯಕ್ಷ ತೇಜೋಮಯ ಮಾತನಾಡಿ, ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಇನ್ನೂ ಆಡಳಿತವರ್ಗ ಮನಸ್ಸು ಮಾಡಿಲ್ಲ. ಅಂಬೇಡ್ಕರ್ ಪ್ರತಿಮೆ ಸಹಿತ ಸರ್ಕಲ್ ನಿರ್ಮಾಣಕ್ಕೆ ಈಗಾಗಲೇ ಮನವಿ ಮಾಡ ಲಾಗೆದೆ. ಆ ಜಾಗದಲ್ಲಿ ಪ್ರತಿಮೆ ಸಹಿತ ಸರ್ಕಲ್ ಸಾಧ್ಯ ಎಂಬ ನೀಲ ನಕ್ಷೆ ಸಹಿತ ಮನವಿ ಸಲ್ಲಿಸಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ಇಂಜಿನಿಯರ್ ಸರ್ಕಲ್ ನಲ್ಲಿ ವಾಹನಗಳ ಓಡಾಟಕ್ಕೆ ಸಾಕಷ್ಟು ಸ್ಥಳ ಇಲ್ಲ ಹೀಗಾಗಿ ಪ್ರತಿಮೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಕೇವಲ ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಯಾಕೆ? ಎಂದು ಪ್ರಶ್ನಿಸಿದರು.
ಯೋಗೀಶ್ ಶೆಟ್ಟಿ ಮಾತಾಡಿ, ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಿಂದ ನಾವೆಲ್ಲರೂ ಇಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದೇವೆ. ಮಂಗಳೂರಲ್ಲಿ ಜ್ಯೋತಿ ಸರ್ಕಲ್ ಅನ್ನು ಹೆಸರಿಗೆ ಮಾತ್ರ ಅಂಬೇಡ್ಕರ್ ಸರ್ಕಲ್ ಮಾಡಲಾಗಿದೆ. ಇದನ್ನು ಅಂಬೇಡ್ಕರ್ ಪ್ರತಿಮೆ ನಿಲ್ಲಿಸಿ ಹೆಸರಿಗೆ ಸೂಕ್ತವಾಗುವಂತೆ ಇಲ್ಲಿ ಸರ್ಕಲ್ ನಿರ್ಮಾಣ ಮಾಡಬೇಕು ಎಂದರು.
ಆದಿದ್ರಾವಿಡ ಸಂಘದ ಶಿವಾನಂದ, ಬಿರುವೆರ್ ಕುಡ್ಲ ಉಪಾಧ್ಯಕ್ಷ ಮಹೇಶ್, ಯೋಗೀಶ್ ಶೆಟ್ಟಿ ಜೆಪ್ಪು, ಲಕ್ಷ್ಮಣ್ ಕಾಂಚನ್, ಶಾಂತಲಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಮಾತನಾಡಿ, ಆ ವೃತ್ತಕ್ಕೆ ಜ್ಯೋತಿ ಸರ್ಕಲ್ ಹೆಸರು ಬರುವ ಮೊದಲು ಅದು ಅಂಬೇಡ್ಕರ್ ವೃತ್ತ ಎಂದೇ ಕರೆಯಲ್ಪಡು ತ್ತಿತ್ತು. ಆದರೆ ಜ್ಯೋತಿ ಟಾಕೀಸ್ ಬಳಿಕ ಅದನ್ನು ಜ್ಯೋತಿ ಸರ್ಕಲ್ ಎಂದು ಕರೆಯಲಾಯಿತು. ಮತ್ತೆ ಅದು ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಗೊಂಡರೂ ವೃತ್ತ ನಿರ್ಮಾಣಕ್ಕೆ ಕೆಲವರ ಇಚ್ಛಾ ಶಕ್ತಿ ಕೊರತೆ ಕಾರಣವಾಗಿದೆ. ಹಾಗಾಗಿ ಅಲ್ಲಿ ಹಿಂದೆ ಇದ್ದ ಅಂಬೇಡ್ಕರ್ ಸರ್ಕಲ್ ಮರು ಸ್ಥಾಪನೆ ಆಗಬೇಕು. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಲು ಸಾಧ್ಯ ಇದೆ ಎಂದು ಮಾದರಿ ನೀಲ ನಕ್ಷೆ ತಯಾರಿಸಿರುವ ಎ.ಜಿ. ಅಸೋಸಿಯೇಟ್ಸ್ ನವರು ಹೇಳಿದ್ದಾರೆ ಎಂದರು.