ತಪ್ಪು ವರದಿ: ಮಾಹಿತಿ ಸಂಗ್ರಹ
ಮಂಗಳೂರು: ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ 4 ತಿಂಗಳ ಮಗುವಿಗೆ ಥೈರಾಯಿಡ್ ಇರುವುದಾಗಿ ತಪ್ಪು ವರದಿ ನೀಡಿರುವ ಕುರಿತು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ತಿಮ್ಮಯ್ಯ ನೇತೃತ್ವದ ತನಿಖಾ ತಂಡ ಶನಿವಾರ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ.
ತಿಂಗಳ ಚುಚ್ಚುಮದ್ದು ಪಡೆದುಕೊಳ್ಳಲೆಂದು ಹೋಗಿದ್ದ ನನ್ನ ಮಗುವಿಗೆ ಥೈರಾಯ್ಡ್ ಇದೆ ಎಂದು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ತಪ್ಪು ವರದಿ ನೀಡಿ ವಂಚಿಸಲಾಗಿದೆ ಎಂದು ಆರೋಪಿಸಿ ಮುಕ್ಕ ಸಸಿಹಿತ್ಲು ನಿವಾಸಿ ರಾಮ ಸಾಲ್ಯಾನ್ ಎಂಬವರು ಸುರತ್ಕಲ್ ಪೊಲೀಸರು ಮತ್ತು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ತಿಮ್ಮಯ್ಯ ಅವರನ್ನು ಭೇಟಿ ಮಾಡಿ ದೂರು ನೀಡಿ ನ್ಯಾಯ ನೀಡುವಂತೆ ಆಗ್ರಹಿಸಿದ್ದರು.
ಇದರ ಪರಿಣಾಮವಾಗಿ ಮಂಗಳೂರು ತಾಲೂಕು ವೈದ್ಯಾಧಿಕಾರಿ, ಓರ್ವ ಮಕ್ಕಳ ತಜ್ಞ ಮತ್ತು ಪರಿಣಿತ ಹಿರಿಯ ಮೈಕ್ರೋ ವ್ಯಾಲಿಜಿಸ್ಟ್ ಒಬ್ಬರನ್ನೊಳಗೊಂಡ ತಂಡ ಶನಿವಾಸ ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತೆರೆಯ ವೈದ್ಯಾಧಿಕಾರಿಗಳಿಂದ ಮಾಹಿತಿಯನ್ನು ಕಲೆಹಾಕಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಈ ತಂಡ ಮಗುವಿನ ಹೆತ್ತವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮಾಹಿತಿಗಳನ್ನು ಕಲೆ ಹಾಕಲಿದೆ ಎನ್ನಲಾಗಿದೆ.