ಲೈಂಗಿಕ ದೌರ್ಜನ್ಯ ತಡೆಗಟ್ಟಲು ಹೆಣ್ಣುಮಕ್ಕಳು ಜಾಗೃತರಾಗಬೇಕು: ಸಬ್‌ಇನ್ಸ್‌ಪೆಕ್ಟರ್ ರೋಸಮ್ಮ ಪಿ.ಪಿ.
ಮಂಗಳೂರು: ಕುಟುಂಬ ಸದಸ್ಯರಿಂದಲೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ವಿಷಾದಕರ ಅಪರಿಚಿತ ವ್ಯಕ್ತಿಗಳಿಂದ ನಮಗಾಗುವ ಅನ್ಯಾಯದ ವಿರುದ್ಧ ದನಿ ಎತ್ತಬೇಕು ಎನ್ನುತ್ತಾ ಮಹಿಳೆಯರ, ವಿದ್ಯಾರ್ಥಿಗಳ, ಹಿರಿಯರ ರಕ್ಷಣೆಗಾಗಿ ಇರುವ ಕಾನೂನುಗಳ ಕುರಿತು ಮಾಹಿತಿ ನೀಡುವುದರ ಜೊತಗೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಿ ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟಲು ಕೈಜೋಡಿಸಬೇಕು ಎಂದು ಕದ್ರಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರೋಸಮ್ಮ ಪಿ.ಪಿ. ಮನವಿ ಮಾಡಿದರು.
ಅವರು ಇಂದು ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಲೈಂಗಿಕ ದೌರ್ಜನ್ಯ ತಡೆ ನಿರ್ವಹಣಾ ಕೋಶ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬೆಸೆಂಟ್ ಮಹಿಳಾ ಕಾಲೇಜಿನ ಸಂಚಾಲಕಿ ಮತ್ತು ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಮಂಜುಳಾ ಕೆ.ಟಿ. ಮುಖ್ಯ ಅತಿಥಿಯಾಗಿ ಕಾರ್ಯವನ್ನು ಉದ್ಘಾಟಿಸಿ, ಸಮಾಜದಲ್ಲಿರುವ ಲೈಂಗಿಕ ದೌರ್ಜನ್ಯ ಎಂಬುದು ಗಂಭೀರ ಸಮಸ್ಯೆಯಾಗಿದ್ದು, ಮಹಿಳೆಯರ ಆತ್ಮಗೌರವದ ಬದುಕಿಗೆ ಅಡ್ಡಿಯಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಾಭಿಮಾನ ಮತ್ತು ಗೌರವಯುತ ಬದುಕು ನಡೆಸಲು ಇಂತಹ ಕಾಯ್ದೆಯ ಅವಶ್ಯಕತೆ ಇದೆ ಎಂದು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ದೀಪಾ ಎಂ. ಅವರು ಲೈಂಗಿಕ ದೌರ್ಜನ್ಯ ತಡೆ ನಿರ್ವಹಣಾ ಕೋಶ ಕಾಯ್ದೆಯ ಕಾರ್ಯ ವೈಖರಿಯ ಕುರಿತು ವಿವರಿಸಿದರು. ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಆಂತರಿಕ ದೂರು ಸಮಿತಿಯವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ., ಲೈಂಗಿಕ ದೌರ್ಜನ್ಯ ತಡೆ ನಿರ್ವಹಣಾ ಕೋಶದ ಸಂಯೋಜಕಿ ಪ್ರೊ. ಹೇಮಲತಾ, ವಿದ್ಯಾರ್ಥಿ ಸಂಘದ ಸಂಚಾಲಕಿ ಪ್ರೊ. ರಂಜಿನಿ ಶೆಟ್ಟಿ, ಶಿಕ್ಷಕ-ಶಿಕ್ಷಕೇತರರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಎಂ.ಕಾಂ. ವಿಭಾಗದ ವಾಣಿಜ್ಯ ಉಪನ್ಯಾಸಕಿ ದೇವಿಕಾ ಸ್ವಾಗತಿಸಿದರು. ನ್ಯಾಕ್ ಸಂಯೋಜಕ ಡಾ. ಪರಶುರಾಮ ಜಿ. ಮಾಳಗೆ ವಂದಿಸಿ, ರಸಾಯನ ಶಾಸ್ತ್ರದ ವಿಭಾಗದ ಉಪನ್ಯಾಸಕಿ ಕಾವ್ಯ ನಿರೂಪಿಸಿದರು.