ರಾಜಕಾರಣಿಗಳ ಒತ್ತಾಯದಿಂದ ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಮೀಸಲಿರಿಸಿದ ಹುದ್ದೆಗಳು ಬೇರೆ ಸಮುದಾಯದವರಿಗೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನೇಕ ವರ್ಷಗಳಿಂದ ಹುದ್ದೆಯಲ್ಲಿರುವ ಎಸ್‌ಸಿ-ಎಸ್‌ಟಿ ಅಧಿಕಾರಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಬೇರೆ ಸಮುದಾಯದವರಿಗೆ ಪಧೋನ್ನತಿ ನೀಡಿ ಆಸ್ಥಾನವನ್ನು ನೀಡುತ್ತಿದ್ದು, ರಾಜ್ಯ ಸರ್ಕಾರ 6 ತಿಂಗಳ ಹಿಂದೇಯೇ ಅದನ್ನು ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ನೀಡಬೇಕು ಎಂದು ಸೂಚಿಸಿದ್ದರೂ ಮುಂದು ವರಿಸಿರುವುದರಲ್ಲಿ ರಾಜಕಾರಣಿಗಳ ಒತ್ತಡ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಅರುಣ್ ಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
33 ವರ್ಷಗಳಿಂದಲೂ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತ ಬರುತ್ತಿದ್ದು, ಇಲ್ಲಿ ಎಲ್ಲಾ ಎಂಎಲ್‌ಎ-ಎಂಪಿ, ಎಂಎಲ್‌ಸಿಗಳು ಬೇಕಾದವರಿಗೆ ಒತ್ತಡ ಹಾಕಿ ಅವರುಗಳಿಗೆ ಆಸ್ಥಾನವನ್ನು ಗಿಟ್ಟಿಸಿಕೊಡುತ್ತಿದ್ದಾರೆ. ಈ ರೀತಿಯ ಹಿಂಬಾಗಿಲಿನ ರಾಜಕಾರಣದಿಂದ ರಾಜಕಾರಣಿಗಳು ತಮ್ಮ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಸ್‌ಸಿ-ಎಸ್‌ಟಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ತೆಗೆದುಕೊಳ್ಳಲು ಹೇಳಿದರೆ ಈಗಾಗಲೇ 250 ಜನರು ಹೆಚ್ಚುವರಿಯಾಗಿದ್ದು, ಅವರನ್ನು ತೆರವುಗೊಳಿಸಿದ ನಂತರ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಅದೇ ಲೋಕಾಯುಕ್ತದ ಎದುರು ಅವರುಗಳ ಅವಶ್ವಕತೆ ಇದೆ ಎಂದು ಕುಲಪತಿಗಳು ತಿಳಿಸಿದ್ದು, ಸತ್ಯವನ್ನು ಹತ್ತಿಕ್ಕುವ ಹುನ್ನಾರವಾಗಿದೆ. ಎಸ್‌ಸಿ-ಎಸ್‌ಟಿಗಳನ್ನು ತೆಗೆದುಕೊಂಡು ಸಂಬಳ ನೀಡಲು ವಿಶ್ವವಿದ್ಯಾನಿಲಯದಲ್ಲಿ ಸೌಕರ್ಯಗಳು ಇಲ್ಲ ಎಂದು ಹೇಳುತ್ತಿದ್ದು, ವಿಶ್ವವಿದ್ಯಾನಿಲಯ ಅಕ್ರಮದ ಕೂಪವಾಗಿದೆ. ಮುಂದಿನ ದಿನಗಳಲ್ಲಿ ಕುಲಪತಿಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯ ಸಂಚಾಲಕ ವಿಶ್ವನಾಥ್ ಬೆಳಂಪಳ್ಳಿ, ಸಾಧಾಶಿವ, ಕೃಷ್ಣ ಉಪಸ್ಥಿತರಿದ್ದರು.
ಆರ್‌ಎಸ್‌ಎಸ್‌ಗೆ ವಿವಿ ಜಾಗ:
ಮಂಗಳೂರು ವಿಶ್ವವಿದ್ಯಾನಿಲಯದ ಜಾಗವನ್ನು ಆರ್‌ಎಸ್‌ಎಸ್ ಸಂಘಟನೆಯ ಕಚೇರಿಯನ್ನು ನಿರ್ಮಿಸಲು ನೀಡಿದ್ದಾರೆ. ೪೫೦ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಹರಿಕೃಷ್ಣ ಬಂಟ್ವಾಳ ಅವರ ಕಂಪೆನಿಗೆ ಆಗಿನ ಸರ್ಕಾರ ಲ್ಯಾಪ್‌ಟಾಪ್ ಖರೀದಿಗೆ ಟೆಂಡರ್ ನೀಡಿದ್ದು, ಒಂದು ಲ್ಯಾಪ್‌ಟಾಟ್‌ಗೆ ೧.೨೦ ಲಕ್ಷ ರೂ. ಪಡೆದಿದ್ದು, ಇದರಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂದು ಅರುಣ್ ಕುಮಾರ್ ಆರೋಪಿಸಿದರು.