‘ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿ’ ಪುತ್ತೂರು ತಾಪಂ ಸಿಬಂದಿಗೆ ಪಂಗನಾಮ...!
ಪುತ್ತೂರು: ಇನ್‌ವರ್ಟರ್, ಡೈನಿಂಗ್ ಟೇಬಲ್, ಮಂಚ, ಎ.ಸಿ, ಟೀವಿ ಪ್ರಿಡ್ಜ್ ವಾಶಿಂಗ್ ಮೆಷಿನ್ ಕೇವಲ ರೂ.95 ಸಾವಿರಕ್ಕೆ ಸಿಗುತ್ತದೆ ಎಂದು ಆಶೆಪಟ್ಟ ತಾಪಂ ಸಿಬಂದಿಯೋರ್ವ ತನ್ನ 10 ಸಾವಿರ ಕಳೆದುಕೊಂಡು ‘ಪಂಗನಾಮ’ ಹಾಕಿಸಿಕೊಂಡು ಘಟನೆ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಸೃಷ್ಟಿಸಿದ ನಕಲಿ ಖಾತೆಯ ವ್ಯವಹಾರದಲ್ಲಿ ಹಣ ಕಳೆದುಕೊಂಡು ಇದೀಗ ಸೈಬರ್ ಕ್ರೈಂನಲ್ಲಿ ಪುತ್ತೂರು ತಾಪಂ ನರೇಗಾ ಸಂಯೋಜಕ ಭರತ್‌ರಾಜ್ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಪೆರ್ಲಂಪಾಡಿ ನಿವಾಸಿ ತಾಪಂ ಸಿಬ್ಬಂದಿ ಭರತ್‌ರಾಜ್ ಅವರಿಗೆ ರಾಧಾಕೃಷ್ಣ ಹೆಸರಲ್ಲಿ ಫೇಸ್‌ಬುಕ್ ರಿಕ್ವೆಸ್ಟ್ ಬಂದಿದ್ದು, ಇದು ಸಂಬಂಧಿಯಾಗಿರುವ ರಾಧಾಕೃಷ್ಣ ಎಂಬವರಿಗೆ ಸೇರಿತ್ತು. ಈ ಹಿನ್ನಲೆಯಲ್ಲಿ ಒಪ್ಪಿಗೆ ಸೂಚಿಸಿದ್ದರು. ಆ.೩೧ರಂದು ಈ ರಾಧಾಕೃಷ್ಣ ಅವರು ತನ್ನ ಸ್ನೇಹಿತ ಬೆಂಗಳೂರಿನಲ್ಲಿ ಸಿಆರ್‌ಪಿ ಯೋಧ. ಇದೀಗ ಆತನಿಗೆ ಜಮ್ಮುಕಾಶ್ಮೀರಕ್ಕೆ ವರ್ಗವಾಗಿದೆ. ಅವರ ಮನೆಯ ಸ್ವತ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಸಂದೇಶ ಕಳುಹಿಸಿದ್ದರು. ಬೆಲೆಬಾಳುವ ವಸ್ತುಗಳ ಕಡಿಮೆ ಬೆಲೆಗೆ ಸಿಗುತ್ತದಲ್ವಾ ಅಂತ ಭರತ್‌ರಾಜ್ ‘ಓಕೆ’ ಅಂದಿದ್ದರು.
ಅವರಿಗೂ ತನ್ನ ನಂಬರ್ ಕಳುಹಿಸಿಕೊಟ್ಟಿದ್ದರು. ಆದರೆ ಕರೆ ಬಂದಾಗ ಸ್ವೀಕರಿಸಲಿಲ್ಲ. ವಾಟ್ಸಾಫ್ ಸಂದೇಶದಲ್ಲಿ ತಾನು ಸಂತೋಷ್ ನಿಮ್ಮ ನಂಬರ್ ರಾಧಾಕೃಷ್ಣ ಅವರು ನೀಡಿದ್ದಾರೆ ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ ಮನೆಯ ಸಾಮಾಗ್ರಿಗಳ ಫೋಟೋ ಕಳುಹಿಸಿದ್ದ. ಇದನ್ನು ನಂಬಿ ಖರೀದಿಗೆ ಭರತ್ ಮುಂದಾಗುತ್ತಾರೆ.
ಈ ಎಲ್ಲಾ ಗೃಹೋಪಯೋಗಿ ವಸ್ತುಗಳ ಬೆಲೆ ರೂ.95 ಸಾವಿರ ಎಂದಿದ್ದ ಸಂತೋಷ್ ಹಣವನ್ನು ಫೋನ್‌ಪೇ ಮೂಲಕ ನೀಡುವಂತೆ ತಿಳಿಸಿದ್ದು, ಆತ ನೀಡಿದ ನಂಬರ್ ಪರಿಶೀಲನೆಯಲ್ಲಿ ಬಾಬುಲಾಲ್ ಎಂಬ ಹೆಸರು ಡಿಸ್‌ಪ್ಲೇ ಆಗುತ್ತಿತ್ತಂತೆ.. ಆದರೂ ರೂ.10 ಸಾವಿರ ಕಳುಹಿಸುತ್ತಾರೆ. ಇದಾದ 10 ನಿಮಿಷದಲ್ಲಿ ಸಿಆರ್‌ಪಿ ವಾಹನದಲ್ಲಿ ವಸ್ತುಗಳನ್ನು ಲೋಡ್ ಮಾಡಿದ ಫೋಟೋ ಬರುತ್ತದೆ. ಜತೆಗೆ ಉಳಿದ ಹಣವನ್ನು ಪಾವತಿ ಮಾಡುವಂತೆ ಪದೇ ಪದೇ ಫೋನ್ ಕೂಡಾ ಬರುತ್ತದೆ. ಆದರೆ ಈ ಹಂತದಲ್ಲಿ ಯಾವುದೋ ಅನುಮಾನಕ್ಕೆ ಒಳಗಾದ ಭರತ್‌ರಾಜ್ ಉಳಿದ ಹಣ ಹಾಕದೆ ದೊಡ್ಡಮೊತ್ತದ ಹಣದ ವಂಚನೆಯಿಂದ ಪಾರಾಗುತ್ತಾರೆ.
ತಕ್ಷಣ ಸಂಬಂಧಿ ರಾಧಾಕೃಷ್ಣ ಅವರ ಫೋನ್ ನಂಬರ್ ಸಂಪಾದಿಸಿ ಅವರನ್ನು ಸಂಪರ್ಕಿಸಿದಾಗ ಇದು ‘ನಕಲಿ ಖಾತೆ’ ಎಂಬುವುದು ಖಚಿತವಾಗುತ್ತದೆ. ಕೆಲ ದಿನಗಳ ಹಿಂದೆಯೇ ಬೆಂಗಳೂರಿನಲ್ಲಿ ತಾನು ದೂರು ನೀಡಿರುವುದಾಗಿ ಅವರು ತಿಳಿಸುತ್ತಾರೆ. ನಾನು ಮೋಸಕ್ಕೆ ಬಲಿಯಾದೆ ಎಂದು ಅರ್ಥವಾಗುವುದರೊಳಗೆ 10 ಸಾವಿರಕ್ಕೆ ಪಂಗನಾಮ ಬಿದ್ದಿತ್ತು.