ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ರೂವಾರಿ ಚಿಕ್ಕಾಯಿ ತಾಯಿ

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ರೂವಾರಿ ಚಿಕ್ಕಾಯಿ ತಾಯಿ


ಆಳುಪ ರಾಜಕುಮಾರಿ, ಹೊಯ್ಸಳ ಸಾಮ್ರಾಟ ಮೂರನೇ ವೀರಬಲ್ಲಾಳನ ಪಟ್ಟದ ಹಿರಿಯ ರಾಣಿ ಚಿಕ್ಕಾಯಿತಾಯಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ರೂವಾರಿ ಎಂದು ನಿವೃತ್ತ ಸಹಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಕ್ರಿ.ಶ. 1336 ರಲ್ಲಿ ಸಂಗಮ ಸಹೋದರರಾದ ಮೊದಲನೇ ಹರಿಹರ ಮತ್ತು ಮೊದಲನೇ ಬುಕ್ಕ, ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಈಗಿನ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆಯಿತು ಎಂದು ಇತಿಹಾಸ ಗ್ರಂಥಗಳಲ್ಲಿ ಬರೆಯಲಾಗಿದೆ. ಆದರೆ, ಒಂದು ಸಾಮ್ರಾಜ್ಯವನ್ನು ಸ್ಥಾಪಿಸಲು ಬೇಕಾದ ಸಂಪನ್ಮೂಲಗಳಾವುದು ಸಂಗಮ ಸಹೋದರರ ಬಳಿ ಇರಲಿಲ್ಲ. ಯಾವುದೇ ಸಂಪನ್ಮೂಲಗಳು ಇಲ್ಲದೆ ಸಾಮ್ರಾಜ್ಯ ಒಂದನ್ನು ಸ್ಥಾಪಿಸುವುದು ಹಾಗೂ ಅದನ್ನು ಪೋಷಿಸುವುದು ನಿಜಕ್ಕೂ ದುಸ್ಸಾಹಸದ ಮಾತು. ಆದ್ದರಿಂದ, ಸಾಮ್ರಾಜ್ಯ ಸ್ಥಾಪಿಸಿದ ಮೊದಲನೇ ಹರಿಹರ ಕ್ರಿ.ಶ. 1336 ರಲ್ಲಿಯೇ ಬಾರಕೂಕಿರಿಗೆ ಭೇಟಿ ಮಾಡಿದ. ಹೊಯ್ಸಳ ಚಕ್ರೇಶ್ವರನ ಪಟ್ಟದ ರಾಣಿಯಾಗಿದ್ದ ಚಿಕ್ಕಾಯಿ ತಾಯಿ ಆಳುಪ ಚಕ್ರವರ್ತಿಯಾಗಿ ತುಳುನಾಡನ್ನು ಆಳ್ವಿಕೆ ಮಾಡುತ್ತಿದ್ದಳು. 

ಬಾರಕೂರಿಗೆ ಆಗಮಿಸಿದ ಮೊದಲನೇ ಹರಿಹರನಿಗೆ ಬಾರಕೂರು ಹಾಗೂ ತುಳುನಾಡಿನ ಸಂಪತ್ತನ್ನು ಸಂಪೂರ್ಣವಾಗಿ ಹರಿಹರನಿಗೆ ಬಿಟ್ಟುಕೊಡುವ ಮೂಲಕ ವಿಜಯನಗರ ಸಾಮ್ರಾಜ್ಯದ ಅಭ್ಯುದಯಕ್ಕೆ ಕಾರಣೀಭೂತಳಾದಳು. ಆದ್ದರಿಂದ, ಚಿಕ್ಕಾಯಿ ತಾಯಿಯೇ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಿಜವಾದ ರೂವಾರಿ. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಗುಳ್ಳಾಡಿ ಪ್ರಸ್ತುತ ಒಂದು ಕುಗ್ರಾಮವಾಗಿದೆ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ಪ್ರದೇಶದಲ್ಲಿ ಏಕೈಕ ಶಾಲೆಯನ್ನು ಹೊಂದಿದ್ದ ಗ್ರಾಮ ಎಂಬ ಹೆಗ್ಗಳಿಕೆಗೆ ಗುಳ್ಳಾಡಿ ಹೆಸರಾಗಿತ್ತು. ಈ ಗುಳ್ಳಾಡಿ ಹೊಯ್ಸಳ ಚಕ್ರವರ್ತಿತಿಯ ಪಟ್ಟದ ಪಿರಿಯರಸಿ ಚಿಕ್ಕಾಯಿ ತಾಯಿಯ ಮಾತೃಮೂಲ ಮನೆಯಾಗಿತ್ತು. 

ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಾಲಯ:

ಇಲ್ಲಿನ ಚಿತ್ತೇರಿ ಬ್ರಹ್ಮಲಿಂಗೇಶ್ವರ ದೇವಾಲಯ, ಕ್ರಿ.ಶ. 14ನೇ ಶತಮಾನದ ಆರಂಭದಲ್ಲಿಯೇ, ಆಳುಪ ರಾಜಕುಮಾರಿ ಮತ್ತು ಹೊಯ್ಸಳ ಮೂರನೇ ವೀರಬಲ್ಲಾಳನ ಪಟ್ಟದ ಪಿರಿಯರಸಿ ಚಿಕ್ಕಾಯಿ ತಾಯಿಯಿಂದ ದಾನವನ್ನು ಪಡೆದ ಜಿಲ್ಲೆಯ ಮೊಟ್ಟಮೊದಲ ಶಾಸನೋಕ್ತ ಅವೈದಿಕ ಪರಂಪರೆಯ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬ್ರಹ್ಮಸ್ಥಾನದ ಹಿಂಭಾಗದ ಬಂಡೆಯ ಮೇಲೆ ಒಂದು, ದ್ವಿಸಾಲಿನ ಕಲ್ಗುಳಿಗಳಿವೆ. ತುಳುನಾಡಿನ ಜನಪ್ರಿಯ ಜಾನಪದ ಕ್ರೀಡೆ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿರುವ ಚೆನ್ನೆಮಣೆಯನ್ನು ಇದು ಹೋಲುತ್ತದೆ. ಇದೇ ಬ್ರಹ್ಮಸ್ಥಾನದ ಮುಂದೆ ಬಲಭಾಗದಲ್ಲಿ ಎರಡು ಶಿಲಾಶಾಸನಗಳಿವೆ. 

ಅಕ್ಕ-ತಂಗಿ ಕಲ್ಲು:

ಸ್ಥಳೀಯವಾಗಿ ಜನರು ಅಲ್ಲಿನ ಶಿಲಾಶಾಸನಗಳನ್ನು ಅಕ್ಕ-ತಂಗಿಯರ ಕಲ್ಲುಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಒಂದು ಚಿಕ್ಕಾಯಿ ತಾಯಿ ಬ್ರಹ್ಮಸ್ಥಾನಕ್ಕೆ ನೀಡಿದ ದಾನದ ವಿವರಗಳನ್ನು ಹೊಂದಿದೆ. ಶಾಸನೋಕ್ತ ವಿವರಗಳ ಪ್ರಕಾರ, ಹೊಯ್ಸಳ ದೇವರ, ಅಂದರೆ ಹೊಯ್ಸಳ ಮೂರನೇ ವೀರ ಬಲ್ಲಾಳನ ಪಟ್ಟದ ಹಿರಿಯ ಅರಸಿ ಹಾಗೂ ತುಳುನಾಡಿನ ಚಕ್ರವರ್ತಿಯಾಗಿ ಆಳ್ವಿಕೆ ನಡೆಸುತ್ತಿದ್ದ ಚಿಕ್ಕಾಯಿ ತಾಯಿ ಹಾಗೂ ಹೊಯ್ಸಳರ ದಂಡನಾಯಕ ವಯಿಜಪ್ಪ ಮತ್ತು ಅಜ್ಜಂಣ ಸಾಹಣಿ ಅಧಿಕಾರಿಗಳು ಎರಡು ಕೋಲ ಬಳಿಯವರು ಕೂಡಿ ಗುಳಹಡಿಯ ಅಂದರೆ ಈಗಿನ ಗುಳ್ಳಾಡಿಯ ಬ್ರಂಮರಿಗೆ 15 ಹೊಂನಿನ ದಾನವನ್ನು ನೀಡಿದ ದಾನ ಶಾಸನ ಇದು. ಶಾಸನದಲ್ಲಿ ಚಿಕ್ಕಾಯಿ ತಾಯಿಯನ್ನು ಅರಿರಾಯ, ಬಸವ ಶಂಕರ, ರಾಯ ಗಜಾಂಕುಶ, ಪಾಂಡ್ಯ ಚಕ್ರವರ್ತಿ ಎಂಬ ಆಳುಪರ ಬಿರುದುಗಳಿಂದ ಕೊಂಡಾಡಲಾಗಿದೆ. ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಆದರೆ, ಇತರೆ ಶಾಸನಗಳ ಸಹಾಯದಿಂದ ಈ ಶಾಸನದ ಕಾಲವನ್ನು 1340-45 ರ ಕಾಲದ ಶಾಸನವೆಂದು ಪರಿಗಣಿಸಬಹುದು.

ಉಳ್ತೂರು ಕಟ್ಟೆಮನೆಯ ಶಾಸನೋಕ್ತ ವೀರಗಲ್ಲು:

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ, ಉಳ್ತೂರು ಕಟ್ಟೆಮನೆಯ ಬೊಬ್ಬರ್ಯ ದೈವಸ್ಥಾನದ ಹಾಡಿಯಲ್ಲಿ ಶಾಸನ ಸಹಿತವಾದ ಒಂದು ವೀರಗಲ್ಲು ಕಂಡುಬಂದಿದೆ. ಶಾಸನ ಶ್ರೀ ಗಣಾಧಿಪತಯೇ ನಮಃ ಎಂದು ಆರಂಭವಾಗಿದ್ದು, ಪ್ರಜೋತ್ಪತ್ತಿ ಸಂವತ್ಸರದ ಶು 10 ಲೂ ಲವಮಾಳುವನ ವಾಳೆಯ (ಹೆಸರು ನಷ್ಟವಾಗಿದೆ) ಹತನಾದ, ಮೃತ ವಾಳೆಯನ ನೆನಪಿಗೆ ಯಾರೋ (ಹೆಸರು ನಷ್ಟವಾಗಿದೆ) ಈ ವೀರಗಲ್ಲನ್ನು ಹಾಕಿಸಿದರು, ಶಾಸನ ಶುಭಮಸ್ತು ಎಂದು ಕೊನೆಯಾಗಿದೆ. 

ಚಿತ್ರಪಟ್ಟಿಕೆ:

ಶಾಸನದ ಚಿತ್ರಪಟ್ಟಿಕೆಯ ಮಧ್ಯಭಾಗದಲ್ಲಿ ಒಬ್ಬ ವೀರ ವೀರಭಂಗಿಯಲ್ಲಿ, ತನ್ನ ಬಲಗೈಯಲ್ಲಿ ಖಡ್ಗವನ್ನು ಎತ್ತಿಹಿಡಿದಿದ್ದು, ಎಡಗೈಯಲ್ಲಿ ಗುರಾಣಿಯನ್ನು ಹಿಡಿದು ನಿಂತಿರುವಂತೆ ಪ್ರಧಾನವಾಗಿ ಚಿತ್ರಿಸಲಾಗಿದೆ. ವೀರನ ಎಡಭಾಗದಲ್ಲಿ ಛತ್ರವನ್ನು ಹಿಡಿದು ನಿಂತಿರುವ ವ್ಯಕ್ತಿಯೊಬ್ಬನ ಶಿಲ್ಪವಿದೆ. ಬಲಭಾಗದಲ್ಲಿ ನಿಂತಿರುವ ವ್ಯಕ್ತಿ ತನ್ನ ಎಡಗೈಯ ಕತ್ತಿಯಿಂದ ತನ್ನ ಹೊಟ್ಟೆಯನ್ನು ಇರಿದುಕೊಂಡಿದ್ದು, ಬಲಗೈಯಲ್ಲಿ ಗುರಾಣಿಯಿದೆ. ಈ ಶಿಲ್ಪಗಳ ಮೇಲ್ಭಾಗದಲ್ಲಿ ಚಂದ್ರ ಮತ್ತು ಸೂರ್ಯರ ಉಬ್ಬು ಶಿಲ್ಪಗಳಿವೆ. ಚಿತ್ರಪಟ್ಟಿಕೆ ಒಂದು ನಿರೂಪಣಾತ್ಮಕ ಶಿಲ್ಪವಾಗಿದ್ದು, ಚರಿತ್ರೆಯ ಘಟನಾವಳಿಯೊಂದನ್ನು ಸುಂದರವಾಗಿ ನಿರೂಪಿಸಿದೆ. 

ಶಾಸನದ ಮಹತ್ವ:

ಶಾಸನದಲ್ಲಿ ನೀಡಿರುವ ಕಾಲದ ವಿವರಗಳು, ಕಾಲಮಾನವನ್ನು ನಿರ್ಧರಿಸಲು ಸಾಕಾಗುವುದಿಲ್ಲ. ಶಾಸನದ ಲಿಪಿ ಲಕ್ಷಣದ ಆಧಾರದ ಮೇಲೆ 15-16ನೇ ಶತಮಾನದ ಶಾಸನವೆಂದು ನಿರ್ಧರಿಸ ಬಹುದಾಗಿದೆ.

ಶಾಸನೋಕ್ತ ವಿವರಗಳು ಮತ್ತು ಚಿತ್ರಿತ ಶಿಲ್ಪಗಳ ಅಧ್ಯಯನದಿಂದ, ಶಾಸನೋಕ್ತ ಲವ ಆಳುವ ಯಾವುದೋ ಘಟನೆಯಲ್ಲಿ ಮರಣ ಹೊಂದಿದ್ದು, ಆತನ ವಾಳೆರ ಅಥವಾ ವೇಳೆವಾಳಿ ತನ್ನ ಯಜಮಾನನ ಮರಣಾನಂತರ ತನ್ನನ್ನು ತಾನೆ ಇರಿದುಕೊಂಡು ಮರಣ ಹೊಂದಿದ್ದಾನೆಂದು ತಿಳಿಯ ಬಹುದಾಗಿದೆ. ಶಾಸನೋಕ್ತ ಲವ ಆಳುವ ಗುಳ್ಳಾಡಿಯ ರಾಜ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದು ಆತನ ಮರಣಾ ನಂತರ ಆತನ ವೇಳೆವಾಳಿ ತಾನೆ ಇರಿದುಕೊಂಡು ಮೃತಪಟ್ಟಿದ್ದಾನೆ. ಈ ವೀರಗಲ್ಲನ್ನು ಸ್ಥಳೀಯರು ಬೊಬ್ಬರ್ಯನ ಕಲ್ಲು ಎಂದು ಆರಾಧಿಸುತ್ತಿರುವುದು ಅತ್ಯಂತ ಕುತೂಹಲದ ಸಂಗತಿಯಾಗಿದೆ.

ಶಾಸನವು ಗುಳ್ಳಾಡಿಯ ಕೋಟೆಯ ಹೊರಭಾಗದ ಹಾಡಿಯಲ್ಲಿದೆ. ಗುಳ್ಳಾಡಿಯಲ್ಲಿ ಆಳುಪ ರಾಣಿ ಹಾಗೂ ಹೊಯ್ಸಳ 3ನೇ ವೀರ ಬಲ್ಲಾಳನ ಪಟ್ಟದರಸಿ ಚಿಕ್ಕಾಯಿ ತಾಯಿಯ ಶಾಸನವಿದೆ. ಗುಳ್ಳಾಡಿ ಕೋಟೆಯಿಂದ ಆವೃತ್ತವಾದ ಒಂದು ಹಳ್ಳಿಯಾಗಿದ್ದು, ಗುಳ್ಳಾಡಿಯ ದಕ್ಷಿಣ ಭಾಗದಲ್ಲಿ ಕೋಟೆಯ ಅವಶೇಷಗಳಿವೆ. ಗುಳ್ಳಾಡಿಯ ಉತ್ತರ ಭಾಗದಲ್ಲಿ ಬಚ್ಚಲ್ ತೋಡು ಎಂಬ ನೀರು ಹರಿವ ತೋಡು ಇದ್ದು ಈ ತೋಡು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ. ಗುಳ್ಳಾಡಿಯ ತೋಡು ಉತ್ತರದಲ್ಲಿ ಗುಳ್ಳಾಡಿಗೆ ನೈಸರ್ಗಿಕ ರಕ್ಷಣೆಯನ್ನು ಒದಗಿಸುತ್ತದೆ, ಜೊತೆಗೆ ಗುಳ್ಳಾಡಿಯ ಬಳ್ಳಿಕೆರೆ, ದೇವಾಡಿಗರ ಮನೆ ಕೆರೆ, ಗುಮ್ಮಿಕೆರೆ, ಚಪ್ಪನ್ ಕೆರೆ, ಅರಳಿಕೆರೆ, ಸಂಕಮ್ಮಳ ಕೆರೆ, ಕೊರಗನ ಕೆರೆ, ಭಟ್ಟಿಕೆರೆ, ಕುಡುಕೆರೆ, ಚಿತ್ತಾರಿ ಕೆರೆ ಎಂಬ ಅನೇಕ ಕೆರೆಗಳಿಗೆ ಜಲಪೂರಣ ಮಾಡುವ ಪ್ರಮುಖ ನೀರಿನ ಮೂಲವಾಗಿದೆ. 

ಈ ಕೆರೆಗಳ ಸಮೃದ್ಧ ನೀರನ್ನು ಗುಳ್ಳಾಡಿಯ ಜನರು ತಮ್ಮ ದೈನಂದಿನ ಅಗತ್ಯಗಳಿಗೆ ಹಾಗೂ ಕೃಷಿಗೆ ಬಳಸಿಕೊಂಡು ಸಂತೃಪ್ತ ಜೀವನವನ್ನು ನಡೆಸುತ್ತಿದ್ದರು. ಗುಳ್ಳಾಡಿಯು ಚಿಕ್ಕಾಯಿ ತಾಯಿಯ ಮಾತೃಮೂಲ ಮನೆಯಾಗಿದ್ದಂತೆ ಕಂಡುಬರುತ್ತದೆ. ಆಳುಪ ಅರಸಿಯರು ತಮ್ಮ ಮಾತೃಮೂಲ ಮನೆಗಳಲ್ಲಿಯೇ ಇದ್ದ ಬಗ್ಗೆ ಆಳುಪ ಶಾಸನಗಳಲ್ಲಿ ಮಾಹಿತಿ ಲಭ್ಯವಿದೆ. ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಕೊರ್ಸಿಯಲ್ಲಿರುವ 1ನೇ ಕುಲಶೇಖರ ಆಳುಪೇಂದ್ರನ ಕ್ರಿ.ಶ. 1162ರ ಆತನ ಆಳ್ವಿಕೆಗೆ ಸಂಬಂಧಿಸಿದ ಶಾಸನ ಅಳಿಯಕಟ್ಟು ಪರಂಪರೆಗೆ ಸಂಬಂಧಿಸಿದ ಒಂದು ಅಪೂರ್ವ ಶಾಸನ. 

ಕ್ರಿ.ಶ. 12ನೇ ಶತಮಾನಕ್ಕೆ ಸೇರಿದ ಈ ಶಾಸನದಲ್ಲಿ ಶ್ರೀಮತ್ಕುಲಶೇಖರ ದೇವರು ತಮ್ಮ ಅಷ್ಟಾಂಗ ಲಕ್ಷ್ಮಿ ಚಂದಲದೇವಿಯವರಿಗೆ, ಅವರ ಬಸುರಿನಲ್ಲಿ ಜನಿಸಿದ ಕುಮಾರಿ ಅರಸಿಲದೇವಿ, ಸುಗ್ಗಲದೇವಿ, ಚಂದಲದೇವಿ, ಅಕ್ಕಾದೇವಿಗೆ, ಅವರ ಬಸುರಿಂದ ಜನಿಸಿದ ಗಂಡು-ಹೆಣ್ಣಿಗೆ ಕೂರಸಿಯನ್ನು (ಈಗಿನ ಕೊರ್ಸಿ) ಕನ್ಯಾದಾನವಾಗಿ ಕೊಟ್ಟರು. ಈ ಶಾಸನ ಅತ್ಯಂತ ಸ್ಪಷ್ಟವಾಗಿ ಕನ್ಯಾದಾನವನ್ನು ನೀಡಿದ್ದು ಹೆಣ್ಣು ಸಂತಾನ ಪರಂಪರೆಗೆ ಎನ್ನುವುದನ್ನು ಖಚಿತಪಡಿಸುತ್ತದೆ. ಈ ಶಾಸನವನ್ನು ನಾಶಪಡಿಸಿದವರಿಗೆ ವಧು ಹತ್ಯೆ ದೋಷ ಬರುತ್ತದೆ ಎಂಬ ಶಾಪಾಶಯ ಶಾಸನದಲ್ಲಿದೆ. ಆದ್ದರಿಂದ, ಗುಳ್ಳಾಡಿಯ ಅಕ್ಕ-ತಂಗಿಯರ ಕಲ್ಲು ಇಲ್ಲಿ ಬಹಳ ಮಹತ್ವವನ್ನು ಪಡೆದುಕೊಳ್ಳುತ್ತವೆ.

ಚಿಕ್ಕಾಯಿತಾಯಿ ಮತ್ತು ಆಕೆಯ ಸಹೋದರ ಆಳುಪ ಸೋಯಿದೆವರಸ ಅಕ್ಕ-ತಂಗಿಯರ ಮಕ್ಕಳಾಗಿದ್ದರಿಂದ ಇಬ್ಬರೂ ಸಹ ಬಾರಕೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರವಾಗಿ ರಾಜ್ಯಭಾರವನ್ನು ಮಾಡಿದರು. ಅಳಿಯಕಟ್ಟಿನ ಕಟ್ಟಳೆಯ ಪ್ರಕಾರ ಸೋಯಿದೇವ ಆಳುಪ ಚಕ್ರವರ್ತಿಯಾಗಿ ಆಳ್ವಿಕೆ ಮಾಡಿದ. ಹೊಯ್ಸಳ ರಾಜಮನೆತನದ ಪಟ್ಟದ ಹಿರಿಯ ಅರಸಿಯಾಗಿ ಚಿಕ್ಕಾಯಿತಾಯಿ ಆಳ್ವಿಕೆಯನ್ನು ನಡೆಸಿದಳು. ಗುಳ್ಳಾಡಿಯ ಹೊಸಿಮನೆಯವರು ತೊಳಹಾರ/ತೊಳಾರ ಬಳಿಗೆ ಸೇರಿದವರಾಗಿದ್ದು, ಪ್ರಸ್ತುತ ಚಿತ್ತೇರಿ ಬ್ರಹ್ಮಲಿಂಗೇಶ್ವರ ದೈವಸ್ಥಾನವು ಈ ಕುಟುಂಬಕ್ಕೆ ಸೇರಿದೆ. ಗುಳ್ಳಾಡಿಯ ಬಹುತೇಕ ಬಂಟ/ನಾಡವರು ಈ ಕುಟುಂಬದ ಕವಲುಗಳಾಗಿದ್ದಾರೆ. ಆದ್ದರಿಂದ ಈ ಕುಟುಂಬವೇ ಚಿಕ್ಕಾಯಿ ತಾಯಿಯ ಮಾತೃಮೂಲ ಮನೆ ಎಂದು ಪರಿಗಣಿಸಬಹುದಾಗಿದೆ ಎಂದು ಪ್ರೊ. ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article