ಬ್ಯಾಂಕ್‌ನಿಂದ ನಿವೃತ್ತ ಸೈನಿಕನ ಹಣದ ಬ್ಯಾಗ್ ಕಳವು: ಪ್ರಕರಣ ಬೇಧಿಸಿದ ಬಂಟ್ವಾಳ ಪೊಲೀಸರು

ಬ್ಯಾಂಕ್‌ನಿಂದ ನಿವೃತ್ತ ಸೈನಿಕನ ಹಣದ ಬ್ಯಾಗ್ ಕಳವು: ಪ್ರಕರಣ ಬೇಧಿಸಿದ ಬಂಟ್ವಾಳ ಪೊಲೀಸರು


ಬಂಟ್ವಾಳ: ಎಸ್‌ಬಿಐನ ಬಿ.ಸಿ.ರೋಡು ಶಾಖೆಯಲ್ಲಿ ನಿವೃತ್ತ ಸೈನಿಕರೋರ್ವರು ಡ್ರಾ ಮಾಡಿದ ಲಕ್ಷಾಂತರ ರೂ. ನಗದಿನ ಬ್ಯಾಗ್ ಬ್ಯಾಂಕಿನೊಳಗೆಯೇ ಕಳವುಗೈದ ಪ್ರಕರಣವನ್ನು ಬೇಧಿಸಿರುವ ಬಂಟ್ವಾಳ ನಗರ ಪೊಲೀಸರು ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ.

ಬಂಟ್ವಾಳ ಉಪ-ವಿಭಾಗದ ವಿಶೇಷ ತನಿಖಾ ತಂಡ ಬೆಳ್ತಂಗಡಿ ನಿವಾಸಿ ಮಹಮ್ಮದ್ ಫಾರೂಕ್ (32) ಎಂಬಾತನನ್ನು ಬಂಟ್ವಾಳ ಸಮೀಪದ ಸರಪಾಡಿಯ ಮಣಿನಾಲ್ಕೂರು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 80 ಸಾ.ರೂ. ನಗದು ಹಣವನ್ನು ಪೊಲೀಸರು ಸ್ವಾಧೀನಪಡಿಸಿದ್ದಾರೆ.

ಸೆ.೪ ರಂದು ಬಂಟ್ವಾಳ ತಾಲೂಕಿನ ರೈಮಂಡ್ ಲೋಬೋ ನಗರದ ಗ್ಲಾಡಿರಾ ನಿವಾಸಿಯಾಗಿರುವ ಅಂಬ್ರೋಸ್ ಡಿ’ಸೋಜ ಅವರಿಗೆ ಸೇರಿದ 1.30 ಲ.ರೂ. ಇದ್ದಂತಹ  ಬ್ಯಾಗ್ ಕಳವಾಗಿತ್ತು.

ಅಂಬ್ರೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಇವರಿಗೆ ಬರುವ ಪಿಂಚಣಿಯ ಹಣವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಅವರ ಖಾತೆಯಿಂದ ಡ್ರಾ ಮಾಡಿ, ಸಮುದಾಯದ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಸೆ.4 ರಂದು 50 ಸಾವಿರ ರೂ.ವನ್ನು ತನ್ನ ಬ್ಯಾಗ್‌ನಲ್ಲಿರಿಸಿಕೊಂಡು ಎಸ್.ಬಿ.ಐ.ನ ಬಿ.ಸಿ.ರೋಡು ಶಾಖೆಗೆ ಬಂದಿದ್ದರು.

ಬ್ಯಾಂಕಿನಲ್ಲಿ ತಮ್ಮ ಖಾತೆಯಿಂದ 80 ಸಾ.ರೂ. ಹಣವನ್ನು ಡ್ರಾ ಮಾಡಿದ್ದು, ಒಟ್ಟು 1.30 ಲ.ರೂ. ಹಣವನ್ನು ಒಂದೇ ಬ್ಯಾಗ್‌ನಲ್ಲಿಟ್ಟು ಬ್ಯಾಂಕ್‌ನ ಟೇಬಲ್ ಮೇಲಿಟ್ಟು, ಪಾಸ್‌ಬುಕ್ ಎಂಟ್ರಿಗಾಗಿ ಕೌಂಟರ್‌ನತ್ತ ತೆರಳಿ ಪಾಸ್ ಬುಕ್ ಎಂಟ್ರಿ ಮಾಡಿಸಿ ವಾಪಸು ಬ್ಯಾಗ್ ಇಟ್ಟಿದ್ದ ಟೇಬಲ್‌ನತ್ತ ಬಂದಾಗ ಬ್ಯಾಗ್ ಅಲ್ಲಿಂದ ಕಾಣೆಯಾಗಿತ್ತು.  ಕಳವಾದ ಬ್ಯಾಗ್ ಸಹಿತ ಪಾಸ್ ಬುಕ್ ಹಾಗೂ ಅದರಲ್ಲಿದ್ದ ದಾಖಲೆಪತ್ರಗಳನ್ನು ಬಿ.ಸಿ. ರೋಡಿನ ಕೈಕುಂಜೆ ರಸ್ತೆಯಲ್ಲಿ ಎಸೆದು ಅದರಲ್ಲಿದ್ದ ನಗದು ಹಣವನ್ನು ಮಾತ್ರ ಎಗರಿಸಿ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಬಂಟ್ವಾಳ ಉಪ-ವಿಭಾಗದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಜಿಲ್ಲಾ ಎಸ್ಪಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರರ ಮುಂದಾಳತ್ವದಲ್ಲಿ, ಬಂಟ್ವಾಳ ಡಿವೈಎಸ್‌ಪಿ ಎಸ್. ವಿಜಯಪ್ರಸಾದ್, ಡಿ.ವೈ.ಎಸ್.ಪಿ. ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಹರೀಶ ಎಂ.ಆರ್. ಕಲೈಮಾರ್ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದಾರೆ.  ಹೆಚ್.ಸಿ.ಗಳಾದ ಹರಿಶ್ಚಂದ್ರ, ರಾಧಾಕೃಷ್ಣ, ಪಿಸಿಗಳಾದ ಬಸವರಾಜ ಎಚ್.ಕೆ., ಕುಮಾರ್ ಎಚ್.ಕೆ., ಅಶೋಕ ಮತ್ತು ರಂಜನ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article