‘ಕಾಂತಾರ 1’ ಸಿನಿಮಾದ ಬಿಡುಗಡೆ ದಿನಾಂಕ ಆದಷ್ಟು ಬೇಗ ಪ್ರಕಟಿಸಲಿದ್ದಾರೆ: ರಿಷಬ್ ಶೆಟ್ಟಿ

‘ಕಾಂತಾರ 1’ ಸಿನಿಮಾದ ಬಿಡುಗಡೆ ದಿನಾಂಕ ಆದಷ್ಟು ಬೇಗ ಪ್ರಕಟಿಸಲಿದ್ದಾರೆ: ರಿಷಬ್ ಶೆಟ್ಟಿ


ಮಂಗಳೂರು: ‘ಕಾಂತಾರ 1’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ, ಆದಷ್ಟು ಬೇಗ ನಿರ್ಮಾಪಕರು ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೇಳಿದ್ದಾರೆ.

ಕಾಂತಾರ ಸಿನಿಮಾಗೆ ಲಭಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ದೆಹಲಿಯಲ್ಲಿ ಸ್ವೀಕರಿಸಿದ ರಿಷಬ್ ಶೆಟ್ಟಿ ಬುಧವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು. ಈ ವೇಳೆ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕಾಂತಾರ 1 ಸಿನಿಮಾ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಈ ಹಿಂದೆ ಕಾಂತಾರಕ್ಕೆ ಎಷ್ಟು ಹೆಮ್ಮೆ ಪಟ್ಟಿದ್ದೀರೋ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರಿ ಎಂದರು.

ದೈವವನ್ನು ಸ್ಟೇಜ್ ಮೇಲೆ ಅನುಕರಣೆ ಮಾಡಬೇಡಿ:

ಕಾಂತಾರ ಸಿನಿಮಾ ಬಳಿಕ ವಿವಿಧ ವೇದಿಕೆಯಲ್ಲಿ ಮನೋರಂಜನೆಗಾಗಿ ದೈವಾರಾಧನೆಗೆ ಅಪಮಾನ, ಅಪಹಾಸ್ಯ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ  ಅವರು, ಕಾಂತಾರ ಬರುವ ಮುಂಚೆ ಸುಮಾರು ಸಿನಿಮಾಗಳಲ್ಲಿ ದೈವರಾಧನೆ ವಿಚಾರ ಬಂದಿದೆ. ಚೋಮನ ದುಡಿಯಿಂದ ಇಲ್ಲಿಯ ವರೆಗೆ ಹಿಡಿದು ಅನೇಕ ಟಿವಿ  ಧಾರಾವಾಹಿಗಳಲ್ಲೂ ದೈವಾರಾಧನೆ ಪ್ರದರ್ಶನವಾಗಿದೆ. ನಾವು ಮೊದಲ ಬಾರಿಗೆ ಮಾಡಿದ್ದಲ್ಲ, ಹಲವಾರು ಭಾಗಗಲ್ಲಿ ಪ್ರದರ್ಶನವನ್ನೂ ಮಾಡಿದ್ದಾರೆ. ಎಷ್ಟೋ ತುಳು ಸಿನಿಮಾಗಳು ದೈವಾರಾಧನೆ ಬಳಸಿ ಪ್ರಶಸ್ತಿ ಪಡೆದಿದೆ. ಸಿನಿಮಾ ಬಂದಾಗ ತುಂಬಾ ಜನಪ್ರಿಯವಾದಾಗ ಮೂಲ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾಡುತ್ತಾರೆ. 

ಬೇರೆ ಬೇರೆ ವೇದಿಕೆಗಳಲ್ಲಿ, ಕಾರ್ಯಕ್ರಮದಲ್ಲಿ ದೈವದ ವೇಷ ಹಾಕುವಾಗ ನೋವಾಗುತ್ತದೆ. ನಾನು ಗುತ್ತಿನ ಮನೆಯವನಾಗಿ ದೈವವನ್ನು ನಂಬಿಕೆ ಇಟ್ಟುಕೊಂಡು ಪೂಜೆ  ಮಾಡಿಕೊಂಡು ಬರುವವನು. ನಾವು ಸಿನಿಮಾ ಮಾಡಬೇಕಾದರೆ ಆ ಸಮುದಾಯದವರ ಸಹಾಯ ಪಡೆದು ಮಾಡಿದ್ದೇವೆ. ಅಷ್ಟು ಶ್ರದ್ಧೆಯಿಂದ ಅದನ್ನು ಮಾಡಿಕೊಂಡು  ಬಂದಿದ್ದೇವೆ. ನಮಗೆ ಕೇವಲ ಅದೊಂದು ಸಿನಿಮಾ ಅಲ್ಲ, ಸಿನಿಮಾದಲ್ಲಿ ಬಣ್ಣ ಹಚ್ಚುತ್ತೇವೆ, ವೇಷ ಹಾಕುತ್ತೇವೆ ಎನ್ನುವಂತಲ್ಲ, ನಿಜವಾಗಲೂ ಅದೊಂದು ದೈವದ  ಸೇವೆ ಎಂಬ ರೀತಿ ಮಾಡಿಕೊಂಡು ಬಂದಿದ್ದೇವೆ. ಹೊರಗಿನವರು ಇದನ್ನು ಅಪಹಾಸ್ಯ ಮಾಡಿದಾಗ ನಂಬಿದವರಿಗೆ ಬೇಜಾರಗೋದು ಸಹಜ.

ನಾನು ಆರಂಭದಿಂದಲೂ ಜನರಲ್ಲಿ ಮನವಿ ಮಾಡಿಕೊಂಡು ಬಂದಿದ್ದೇನೆ. ನಾನು ಕಾಂತರವನ್ನು ಸಿನಿಮಾದ ರೀತಿಯಲ್ಲಿ ಮಾಡಿಲ್ಲ, ಹೊರಗಿನವರಿಗೆ ದೈವವನ್ನು ಸ್ಟೇಜ್  ಮೇಲೆ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದರು. 

ವದಂತಿಗೆ ಕಿವಿಗೊಡಬೇಡಿ:

ಕಾಂತಾರ 1ನಲ್ಲಿ ಮೋಹನ್‌ಲಾಲ್, ಜೂನಿಯರ್ ಎನ್‌ಟಿಆರ್ ನಟನೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ರಿಷಬ್ ಶೆಟ್ಟಿ, ಸಿನೆಮಾದಲ್ಲಿಇವರ ನಟನೆ ಎಲ್ಲ ವದಂತಿ, ಅದಕ್ಕೆ ಕಿವಿ ಕೊಡಬೇಡಿ. ಸದ್ಯಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಯೋಚನೆ ಇಲ್ಲ, ಶೂಟಿಂಗ್ ಮುಗಿಸುವ ಯೋಜನೆಯಲ್ಲಿ ಇದ್ದೇವೆ. ಶೀಘ್ರದಲ್ಲೇ ದೊಡ್ಡ  ಮಟ್ಟದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಕಾರ್ಯಕ್ರಮ ಮಾಡುತ್ತೇವೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article