
‘ದುಬೈ ಗಡಿನಾಡ ಉತ್ಸವ-2024’
ಮಂಗಳೂರು: ಕಾಸರಗೋಡು ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಯ ಯುಎಇ ಘಟಕದ ಆಶ್ರಯದಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮೂರನೇ ‘ದುಬೈ ಗಡಿನಾಡ ಉತ್ಸವ-2024’ ಅ.13ರಂದು ದುಬೈ ಜಮ್ ಶಾಲಾ ಸಭಾಂಗಣದಲ್ಲಿ ಜರಗಲಿದೆ ಎಂದು ಅಕಾಡೆಮಿಯ ಸಂಸ್ಥಾಪಕ ಎಸ್.ಪ್ರದೀಪ ಕುಮಾರ ಕಲ್ಕೂರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅ.13ರಂದು ಅಪರಾಹ್ನ 3 ಗಂಟೆಗೆ ಯುಎಇ ಆಕ್ಮೇ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್ ಶೇರಿಗಾರ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇಯ ಸಲಹಾ ಸಮಿತಿ ಅಧ್ಯಕ್ಷ ಅಶ್ರಫ್ ಶಾ ಮಂತೂರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಮಹಾಮೇಳಕ್ಕೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಶಿವಶಂಕರ್ ನೆಕ್ರಾಜೆ, ಲಿತೇಶ್ ನಾಯ್ಕಾಪು, ಸತೀಶ್ ಪೂಜಾರಿ, ಯೂಸುಫ್ ಸಾಗ್, ರೊನಾಲ್ಡ್ ಮಾರ್ಟಿಸ್ ಅವರನ್ನು ಹಾಗೂ ದುಬೈಯ ಹಿರಿಯ ಕನ್ನಡ ಪರ ಸಂಸ್ಥೆಯಾದ ಯಕ್ಷಗಾನ ಅಭ್ಯಾಸ ಕೇಂದ್ರ, ದುಬೈಯ ದಿ ಸ್ಪೀಚ್ ಕ್ಲಿನಿಕ್‌ನ ಮುಖ್ಯಸ್ಥರನ್ನು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣಬೇವಿನ ಮರದ ಸನ್ಮಾನಿಸಲಿದ್ದಾರೆ. ಶಾಸಕರಾದ ಸತೀಶ್ ಸೈಲ್ ಮತ್ತು ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕಲ್ಕೂರ ತಿಳಿಸಿದರು.
ರಾತ್ರಿ 8ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಈ ಸಾಲಿನ ದುಬೈ ಗಡಿನಾಡ ರತ್ನ ಪ್ರಶಸ್ತಿಯನ್ನು ಯುಎಇಯ ಕೆಎನ್‌ಆರ್‌ಐ ಫಾರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬೈಯ ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸ, ಕುನಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಫಕ್ರುದ್ದೀನ್ ಕುನಿಲ್, ದುಬೈ ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ, ಯುಎಇ ಅಲ್‌ಬಾಕ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸಫ್ ಉಪ್ಪಳ, ದುಬೈ ಆಸ್ಟರ್ ಡಿ.ಎಂ.ಹೆಲ್ತ್ ಕೇರ್‌ನ ಸಹಾಯಕ ಜನರಲ್ ಮ್ಯಾನೇಜರ್ ಬಶೀರ್ ಬಂಟ್ವಾಳ್ ಅವರಿಗೆ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ದುಬೈ ಗಡಿನಾಡ ಉತ್ಸವ ಸಮಿತಿಯ ಸಂಚಾಲಕ ಝಡ್.ಎ.ಕೈಯಾರ್, ಸಂಯೋಜಕ ವಿಜಯ ಕುಮಾರ್ ಶೆಟ್ಟಿ ಗಾನದ ಮೂಲೆ ಉಪಸ್ಥಿತರಿದ್ದರು.