ಅ.3 ರಿಂದ 14ರವರೆಗೆ ವೈಭವದ ಮಂಗಳೂರು ದಸರಾ: ಬಿ. ಜನಾರ್ದನ ಪೂಜಾರಿ

ಅ.3 ರಿಂದ 14ರವರೆಗೆ ವೈಭವದ ಮಂಗಳೂರು ದಸರಾ: ಬಿ. ಜನಾರ್ದನ ಪೂಜಾರಿ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವ ಅ.3 ರಿಂದ 14ರವರೆಗೆ ವೈಭವದಿಂದ ನಡೆಯಲಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಸರಾ ಅಂಗವಾಗಿ ಪ್ರತಿನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ಸೇವೆಗಳು ನಡೆಯಲಿದೆ. ಈ ಬಾರಿಯ ದಸರಾಕ್ಕೂ ದೇಶ-ವಿದೇಶದಿಂದ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿ, ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ವೈಭವದ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಅ.3ರಂದು ಬೆಳಗ್ಗೆ  8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ಧರ್ನುಲಗ್ನ, ಕಲಶ ಪ್ರತಿಷ್ಠೆ, ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ. ದಸರಾ ಉದ್ಘಾಟನೆ, ಬಳಿಕ ಪುಷ್ಪಾಲಂಕಾರ ಮಹಾಪೂಜೆ, 12.30ರಿಂದ ಅನ್ನಸಂತರ್ಪಣೆ. ಭಜನಾ ಕಾರ್ಯಕ್ರಮ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ ಉತ್ಸವ ನಡೆಯಲಿದೆ. ಅ.4ರಂದು ಬೆಳಗ್ಗೆ 10ಕ್ಕೆ ದುರ್ಗಾಹೋಮ, 12.30ರಿಂದ ಅನ್ನಸಂತರ್ಪಣೆ. ಅ.5ರಂದು ಬೆಳಗ್ಗೆ ಗಂಟೆ 10ಕ್ಕೆ ಪಂಚ ದುರ್ಗಾಹೋಮ, 12.30ರಿಂದ ಅನ್ನಸಂತರ್ಪಣೆ, ಅ.6ರಂದು ಬೆಳಗ್ಗೆ ಗಂಟೆ 10ಕ್ಕೆ ಆರ್ಯ ದುರ್ಗಾಹೋಮ,12.30ರಿಂದ ಅನ್ನಸಂತರ್ಪಣೆ. ಅ.7ರಂದು ಬೆಳಗ್ಗೆ 10ಕ್ಕೆ ಅಂಬಿಕಾ ದುರ್ಗಾ ಹೋಮ, 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಅ.8ರಂದು ಬೆಳಗ್ಗೆ ಗಂಟೆ 10ಕ್ಕೆ ಭಗವತೀ ದುರ್ಗಾ ಹೋಮ (ಲಲಿತಾ ಪಂಚಮಿ) 12.30ರಿಂದ ಅನ್ನಸಂತರ್ಪಣೆ, ಅ. 9ರಂದು ಬೆಳಗ್ಗೆ  ಗಂಟೆ 9ಕ್ಕೆ ಸಾಮೂಹಿಕ ಚಂಡಿಕಾ ಹೋಮ, ಕುಮಾರಿ ದುರ್ಗಾ ಹೋಮ, ಪುಷ್ಪಾಲಂಕಾರ ಮಹಾಪೂಜೆ, 12.30ರಿಂದ ಅನ್ನಸಂತರ್ಪಣೆ. ಅ.10ರಂದು ಬೆಳಗ್ಗೆ ಗಂಟೆ 10 ಗಂಟೆಗೆ ಮಹಿಷರ್ದಿನಿ ದುರ್ಗಾ ಹೋಮ, 12.30ರಿಂದ ಅನ್ನಸಂತರ್ಪಣೆ. ಅ.11ರಂದು ಬೆಳಗ್ಗೆ ಗಂಟೆ 10 ಗಂಟೆಗೆ ಚಂಡಿಕಾಹೋಮ ಹಗಲೋತ್ಸವ, 12.30ರಿಂದ ಅನ್ನಸಂತರ್ಪಣೆ.
ಅ.12ರಂದು ಬೆಳಗ್ಗೆ ಗಂಟೆ 10 ಗಂಟೆಗೆ ಸರಸ್ವತಿ ದುರ್ಗಾಹೋಮ,11.30ರಿಂದ ಶತ ಸೀಯಾಳಾಭಿಷೇಕ, ಶಿವಪೂಜೆ (ಮಹಾನವಮಿ), ಮಹಾಅನ್ನಸಂತರ್ಪಣೆ.
ವೈಭವದ ಮೆರವಣಿಗೆ: ಅ.13ರಂದು ಬೆಳಗ್ಗೆ ಗಂಟೆ 10 ಗಂಟೆಯಿಂದ ವಾಗೀಶ್ವರಿ ದುರ್ಗಾಹೋಮ, 12.30ಕ್ಕೆ ಶಿವಪೂಜೆ. ಸಂಜೆ 4 ಗಂಟೆಯಿಂದ ಮಹಾಗಣಪತಿ, ನವದುರ್ಗೆ, ಆದಿಶಕ್ತಿಯೊಂದಿಗೆ ಶ್ರೀ ಶಾರದ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಅ.14ರಂದು ಬೆಳಗ್ಗೆ ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶಾರದಾ ವಿಸರ್ಜನೆ,  ರಾತ್ರಿ 7 ಗಂಟೆಯಿಂದ ಭಜನಾ ಕಾರ್ಯಕ್ರಮ, 8 ಗಂಟೆಯಿಂದ ಗುರುಪೂಜೆ ನಡೆಯಲಿದೆ ಎಂದರು.
ಅ.6ರಂದು ಹಾಫ್ ಮ್ಯಾರಥಾನ್: ಅ.6ರಂದು ಬೆಳಗ್ಗೆ 5.30ಕ್ಕೆ ಹಾಫ್ ಮ್ಯಾರಥಾನ್ ನಡೆಯಲಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿನಿತ್ಯ ಸಂಜೆ ಸಂತೋಷಿ ಕಲಾ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ-ಉಪಾಧ್ಯಕ್ಷ ಡಾ. ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ದೇವಳ ಅಭಿವೃದ್ಧಿ  ಸಮಿತಿ ಸದಸ್ಯರಾದ ಕಿಶೋರ್ ದಂಡೆಕೇರಿ, ವಾಸುದೇವ ಕೋಟ್ಯಾನ್, ಎಚ್.ಎಸ್. ಜೈರಾಜ್, ಲತೀಶ್ ಎಂ. ಸುವರ್ಣ, ರಾಧಾಕೃಷ್ಣ , ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್, ಗೌರವಿ ರಾಜಶೇಖರ್, ಕೃತಿನ್ ದೀರಾಜ್ ಅಮೀನ್ ಉಪಸ್ಥಿತರಿದ್ದರು.
ಸೆ.13ರಂದು ಭವ್ಯ ಶೋಭಾಯಾತ್ರೆ: ಸಾಯಿರಾಂ
ಅ.13ರ ಭಾನುವಾರ ಸಂಜೆ 4 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಕೇರಳದ ಮೈನವಿರೇಳಿಸುವ ಚೆಂಡೆ ವಾದ್ಯ, ರಾಜ್ಯದ ನಾನಾ ಕಡೆಯಿಂದ ಆಗಮಿಸುವ ಜಾನಪದ, ಸಾಂಸ್ಕೃತಿಕ ಹಿನ್ನಲೆಯ ನೃತ್ಯ ತಂಡಗಳು ನಾನಾ ಜಿಲ್ಲೆ, ರಾಜ್ಯಗಳ ಕಲಾ ತಂಡಗಳು, ಸ್ತಬ್ದ ಚಿತ್ರಗಳು ಭಾಗವಹಿಸಲಿವೆ ಎಂದು ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹೇಳಿದರು.
ದೇವಳ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಮಂಗಳೂರು ದಸರಾ ಮಹೋತ್ಸವ ಹಾದು ಹೋಗುವ ರಸ್ತೆ ಸೇರಿದಂತೆ ನಗರದ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಮಹೋತ್ಸವಕ್ಕೆ ಮತ್ತಷ್ಟು ವೈಭವ ತುಂಬಬೇಕು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article