
ನ.3 ರಂದು ಸಾರ್ವಜನಿಕ ಧನಲಕ್ಷ್ಮೀ ಪೂಜೆ
ಮಂಗಳೂರು: ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ ದ.ಕ. ಜಿಲ್ಲೆ ವತಿಯಿಂದ ಸಾರ್ವಜನಿಕ ಧನಲಕ್ಷ್ಮೀ ಪೂಜೆ ನ.3ರಂದು ಬೆಳಗ್ಗೆ 9 ಗಂಟೆಗೆ ಬಿ.ಸಿ. ರೋಡಿನ ರಕ್ತೇಶ್ವರೀ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ರವೀಂದ್ರ ದಾಸ್ ಹೇಳಿದರು.
ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8.30ಕ್ಕೆ ಕುಣಿತ ಭಜನೆ, 9 ಗಂಟೆಗೆ ಸಾರ್ವಜನಿಕ ಧನಲಕ್ಷ್ಮೀ ಪೂಜೆ ಪ್ರಾರಂಭ, 11 ಗಂಟೆಗೆ ಮಹಾಪೂಜೆ, 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಎಂದರು.
ಕುಣಿತ ಭಜನೆ ಬಗ್ಗೆ ಸಲ್ಲದ ಮಾತು ಬೇಡ..:
ಕುಣಿತ ಭಜನೆ ವಿರೋಧಿಸುವವರೂ ನಮ್ಮ ಕಾರ್ಯಕ್ರಮದಲ್ಲಿ ಸೇರಿಕೊಳ್ಳಲಿ. ಕುಣಿತ ಭಜನೆ ಬಗ್ಗೆ ಜನಪ್ರತಿನಿಧಿಯಾಗಿದ್ದವರು ಇಲ್ಲಸಲ್ಲದ್ದು ಮಾತನಾಡುವುದು ಸರಿಯಲ್ಲ ಎಂದು ಸಂಘದ ಗೌರವ ಸಲಹೆಗಾರ ದಿನೇಶ್ ಅಮ್ಟೂರು ಹೇಳಿದರು.
ಇತ್ತೀಚೆಗೆ ಪಾಲಿಕೆ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಅವರು ಕುಣಿತ ಭಜನೆ ವಿರೋಧಿಸಿ ನೀಡಿದ ಹೇಳಿಕೆ ಕುರಿತ ಪ್ರಶ್ನೆಗೆ ಅವರ ಹೆಸರು ಉಲ್ಲೇಖಿಸದೆ ಪ್ರತಿಕ್ರಿಯಿಸಿದ ದಿನೇಶ್ ಅಮ್ಟೂರು, ಕಲ್ಲಡ್ಕದಲ್ಲಿ ಪ್ರತಿ ವರ್ಷ ಕುಣಿತ ಭಜನೆ ಏರ್ಪಡಿಸಲಾಗುತ್ತಿದೆ. ಕುಣಿತ ಭಜನೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಹೆತ್ತವರು, ಮನೆ ಮಂದಿಯೂ ಪಾಲ್ಗೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಕುಣಿತ ಭಜನೆ ಬಗ್ಗೆ ಮಾತನಾಡುವವರು ರಸ್ತೆ ಬದಿ ನಮಾಜ್ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಇವರಿಗೆ ಸನಾತನ ಧರ್ಮ ಮಾತ್ರ ಯಾಕೆ ಕಾಣುತ್ತದೆ? ಸ್ವಲ್ಪ ಯೋಚಿಸಿ ಮಾತನಾಡಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಜಯರಾಮ ಶೆಟ್ಟಿಗಾರ್, ಪ್ರಾಣೇಶ್ ರಾವ್, ಧನಂಜಯ್, ಪ್ರಕಾಶ್ ಉಪಸ್ಥಿತರಿದ್ದರು.