ಅ.4 ರಂದು ನೂತನ ಕಟ್ಟಡ ಲೋಕಾರ್ಪಣೆ-ತ್ರಿಶಾ ಪದವಿ ಕಾಲೇಜು ಬಂಗ್ರ ಕೂಳೂರಿಗೆ ಸ್ಥಳಾಂತರ
Tuesday, October 1, 2024
ಮಂಗಳೂರು: ನಗರದ ಅಳಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತ್ರಿಶಾ ಪದವಿ ಕಾಲೇಜು ಇದೀಗ ನಗರದ ಬಂಗ್ರಕೂಳೂರಿಗೆ ಸ್ಥಳಾಂತರಗೊಂಡಿದೆ ಎಂದು ತ್ರಿಶಾ ಸಮೂಹ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ ಕಾಯರ್‌ಕಟ್ಟೆ ಹೇಳೀದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗ್ರ ಕೂಳೂರಿನ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಹತ್ತಿರದ ಗಣೇಶ್ ಬಾಗ್ ಲೇಔಟ್‌ನ ವಿದ್ಯಾರ್ಥಿ ಗ್ರಾಮದಲ್ಲಿ ಸುಮಾರು ಒಂದು ಎಕರೆಯ ಜಾಗದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಅದರ ಲೋಕಾರ್ಪಣಾ ಸಮಾರಂಭ ಕಾರ್ಯಕ್ರಮ ಅ.4ರ ಪೂರ್ವಾಹ್ನ 10 ಗಂಟೆಗೆ ಜರಗಲಿದೆ ಎಂದರು.
ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ ಇವರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಶಾಸಕ ಡಾ. ಭರತ್ ಶೆಟ್ಟಿ ವೈ, ಮೈಸೂರು ಎಂಜಿಬಿ ವರ್ಕ್ಸ್ನ ಪ್ರಮೋಟರ್ ಗೋವಿಂದ ಜಗನಾಥ ಶೆಣೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ದೀಕ್ಷಾ ಸಂಸ್ಥೆಯ ಸ್ಥಾಪಕ ಡಾ. ಶ್ರೀಧರ್ ಜಿ, ಐಸಿಎಐನ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಗೌತಮ್ ಪೈ ಡಿ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್ ಮತ್ತಿತರರು ಭಾಗವಹಿಸುವರು. ತ್ರಿಶಾ ಸಮೂಹ ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಲಿದರು.
1998ರಲ್ಲಿ ಆರಂಭವಾದ ತ್ರಿಶಾ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ 26 ಸಂವತ್ಸರಗಳನ್ನು ಪೂರೈಸಿದೆ. 80,000ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ ಎಂದವರು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತ್ರಿಶಾ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಕಾಮತ್, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಪ್ರಭಾ ಎಂ., ತ್ರಿಶಾ ಕ್ಲಾಸಸ್ ಸೆಂಟರ್ ಹೆಡ್ ಪ್ರೊ. ಯಶಸ್ವಿನಿ ಯಶಪಾಲ್ ಉಪಸ್ಥಿತರಿದ್ದರು.