ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

ಮಂಗಳೂರು: ಪ್ರೌಢಶಾಲೆಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದ ಆರೋಪಿ ಶಿಕ್ಷಕನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ ಎಫ್‌ಟಿಎಸ್‌ಸಿ-1)ವು 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಮೂಲತಃ ಹತ್ಯಡ್ಕ ಅರಸಿನಮಕ್ಕಿ ಪಡ್ಡಾಯಿಬೆಟ್ಟುವಿನ ಪ್ರಸಕ್ತ ಕಲ್ಲಮುಂಡ್ಕೂರು ನಿವಾಸಿ ಗುರುವ ಮೊಗೇರ ಯಾನೆ ಗುರುವ ಎಂ.ಪಿ. (49) ಶಿಕ್ಷೆಗೊಳಗಾದ ಆರೋಪಿ.

ಶಿಕ್ಷಕ ವೃತ್ತಿಯಲ್ಲಿದ್ದ ಆರೋಪಿಯು ರಜೆ ಅಥವಾ ಪಠ್ಯಕ್ಕೆ ಸಂಬಂಧಪಟ್ಟಂತೆ ಏನಾದರೂ ಸಂದೇಹವಿದ್ದರೆ ಶಾಲೆಯಲ್ಲಿರುವ ಪ್ರತ್ಯೇಕ ಕೊಠಡಿಗೆ ವಿದ್ಯಾರ್ಥಿನಿಯರನ್ನು ಬರ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಕೆಲವೊಮ್ಮೆ ಒಬ್ಬೊಬ್ಬ ವಿದ್ಯಾರ್ಥಿನಿಯರನ್ನೇ ರೂಮಿಗೆ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಶಾಲೆಯ ಪ್ರಧಾನ ಶಿಕ್ಷಕರಲ್ಲಿ ದೂರು ನೀಡಿದ್ದರು.

2024ರ ಮಾ.12ರಂದು ವಿದ್ಯಾರ್ಥಿನಿಯೊಬ್ಬಳು ತನಗೆ ಶಿಕ್ಷಕನು 2 ಬಾರಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ನೀಡಿದ್ದಳು. ಅದರಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ ಇತರ 4 ಮಂದಿ ವಿದ್ಯಾರ್ಥಿನಿಯರು ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ ಎಫ್‌ಟಿಎಸ್‌ಸಿ-1) ನ್ಯಾಯಾಧೀಶ ಡಿ. ವಿನಯ್ ವಿಚಾರಣೆ ನಡೆಸಿ ಐಪಿಸಿ 354 (ಲೈಂಗಿಕ ಕಿರುಕುಳ)ರಡಿ 1 ವರ್ಷ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಸಜೆ, ಕಲಂ 10 (ಪೊಕ್ಸೊ)ರಡಿ ೫ ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಜೆ, ಕಲಂ 12 (ಪೊಕ್ಸೊ)ರಡಿ 3 ವರ್ಷ ಸಾದಾ ಸಜೆ ಮತ್ತು 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಅಲ್ಲದೆ ವಿದ್ಯಾರ್ಥಿನಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ೧ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಠಾಣೆಯ ಎಸ್ಸೈ ಶಿವರುದ್ರಮ್ಮ ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿದ್ಯಾರ್ಥಿನಿಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article