
ರೈಲು ಹಳಿಯಲ್ಲಿ ಜಲ್ಲಿಕಲ್ಲು: ಮಕ್ಕಳ ಕೃತ್ಯ ಎಂಬ ಶಂಕೆ
ಉಳ್ಳಾಲ: ರೈಲು ಹಳಿಯಲ್ಲಿ ಜಲ್ಲಿಕಲ್ಲು ಇಟ್ಟ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪದ ಗಣೇಶ್ ನಗರ, ಕಾಪಿಕಾಡ್ ನಡುವೆ ಶನಿವಾರ ರಾತ್ರಿ ನಡೆದಿದ್ದು, ಮಕ್ಕಳು ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ.
ಮಂಗಳೂರಿನಿಂದ ಕೇರಳ ಕಡೆಗೆ ರೈಲು ಸಾಗಿದಾಗ ಸಣ್ಣ ಸದ್ದು ಕೇಳಿಸಿದೆ. ಕೇರಳದಿಂದ ಮಂಗಳೂರು ಕಡೆಗೆ ರೈಲು ಸಂಚರಿಸಿದ ವೇಳೆ ಇದರ ದೊಡ್ಡ ಸದ್ದಿನಿಂದ ಸ್ಥಳೀಯ ಮನೆಗಳಲ್ಲಿ ಕಂಪನ ಅನುಭವ ಉಂಟಾಗಿತ್ತು. ಇದರಿಂದ ಭೀತಿಗೊಳಗಾದ ಜನರು ಲೈಟ್ ಹಿಡಿದು ಹಳಿ ಸಮೀಪ ಬಂದು ನೋಡಿದಾಗ ಹುಡಿಯಾದ ಸ್ಥಿತಿಯಲ್ಲಿ ಜಲ್ಲಿ ಕಲ್ಲು ಪತ್ತೆಯಾಗಿದೆ. ದುಷ್ಕರ್ಮಿಗಳು ಎರಡೂ ಹಳಿಯಲ್ಲಿ ಜಲ್ಲಿಕಲ್ಲನ್ನು ಸಾಲಾಗಿ ಜೋಡಿಸಿ ಇಟ್ಟಿದ್ದರು.
ಸ್ಥಳೀಯ ನಿವಾಸಿ ರಾಜೇಶ್ ರೈಲ್ವೇ ಸಲಹಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ್ದು, ರೈಲ್ವೇ ಸಲಹಾ ಸಮಿತಿ ಸದಸ್ಯರ ದೂರಿನಂತೆ ಉಳ್ಳಾಲ ಪೊಲೀಸರು ಮತ್ತು ರೈಲ್ವೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು.
ಮಕ್ಕಳ ಕೃತ್ಯ:
ರೈಲ್ವೆ ಹಳಿ ಸಮೀಪ ಆಟವಾಡುತ್ತಿದ್ದ ಮಕ್ಕಳು ಕಲ್ಲು ಇಟ್ಟು ಹೋಗಿರಬೇಕು ಎಂಬ ಸಂಶಯ ಬಲವಾಗಿದೆ. ಮಕ್ಕಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತೆ ಇಲ್ಲ. ಉದ್ದೇಶ ಪೂರ್ವಕವಾಗಿ ಈ ಕೃತ್ಯ ನಡೆದಿಲ್ಲ ಎಂದು ರೈಲ್ವೆ ವಲಯ ಸಬ್ ಇನ್ಸ್ಪೆಕ್ಟರ್ ಪ್ರೇಮ್ ತಿಳಿಸಿದ್ದಾರೆ.