ಪಿಲಿನಲಿಕೆ ಸೀಸನ್-9ಗೆ ಚಾಲನೆ
ಮಂಗಳೂರು: ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿ ಸಹಯೋಗದಲ್ಲಿ ಪಿಲಿನಲಿಕೆ ಸೀಸನ್-9 ಉದ್ಘಾಟನಾ ಕಾರ್ಯಕ್ರಮ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಮಾತನಾಡಿ, ‘ಹುಲಿವೇಷದ ಕಲಾವಿದರಿಗೆ ಹೆಚ್ಚಿನ ಶಕ್ತಿ ಕೊಡಲಿ. ಶ್ರೀದೇವಿಯ ಆಶೀರ್ವಾದ ಸದಾ ಇಂತಹ ಕಾರ್ಯಕ್ರಮಗಳ ಮೇಲಿರಲಿ’ ಎಂದು ಹೇಳಿದರು.
ಮಾರ್ಸ್ಕ್ ಸಂಸ್ಥೆ ಸಿಇಓ ಗೌತಮ್ ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಬಲ ಇದ್ದವರು ಮಾತ್ರ ನಾಯಕರಾಗುತ್ತಿದ್ದರು ಆದರೆ ಇಂದು ಬುದ್ಧಿ ಇರುವವರು ನಾಯಕರಾಗುತ್ತಿದ್ದಾರೆ. ಪಿಲಿ ನಲಿಕೆ ಆಯೋಜಕರಾದ ಮಿಥುನ್ ರೈ ಅವರು ಬಲ, ಬುದ್ಧಿ ಮತ್ತು ಹೃದಯವನ್ನು ಹೊಂದಿರುವ ನಾಯಕರಾಗಿದ್ದಾರೆ. ಅವರ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮಾತನಾಡಿ, ಪಿಲಿ ನಲಿಕೆಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇದೇ ಕಾರಣಕ್ಕೆ ವಿದೇಶಗಳಲ್ಲೂ ನಮ್ಮ ಸಂಸ್ಕೃತಿ ಹಬ್ಬಿದೆ. ಹುಲಿ ವೇಷಕ್ಕೆ ವೇದಿಕೆ ಸೃಷ್ಟಿಸಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.
ಎಸಿಪಿ ಗೀತಾ ಕುಲಕರ್ಣಿ ಮಾತನಾಡಿ, ಮಿಥುನ್ ರೈ ನೇತೃತ್ವದ ಪಿಲಿ ನಲಿಕೆ ನೂರು ಸೀಸನ್‌ಗಳನ್ನೂ ದಾಟಿ ಮುಂದುವರಿಯಲಿ. ತುಳುನಾಡಿನ ಇಂತಹ ಕಾರ್ಯಕ್ರಮಗಳು ಯಶಸ್ಸು ಕಾಣಲಿ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ನಮ್ಮ ಟಿವಿ ಸಿಇಓ ಶಿವಚರಣ್ ಶೆಟ್ಟಿ, ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ. ಮಿಥುನ್ ರೈ, ವೆಂಕಟೇಶ್ ಭಟ್ ಪಾವಂಜೆ, ಕೆ.ಕೆ. ಪೇಜಾವರ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಡಾ. ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.