ಮೈಸೂರು ದಸರಾದೊಂದಿಗೆ ನಿಲ್ಲುವುದು ನಮ್ಮ ಮಂಗಳೂರು ದಸರಾ...

ಮೈಸೂರು ದಸರಾದೊಂದಿಗೆ ನಿಲ್ಲುವುದು ನಮ್ಮ ಮಂಗಳೂರು ದಸರಾ...


ಮೈಸೂರಿನಲ್ಲಿ ಮೈಸೂರು ದಸರಾ ಪ್ರಸಿದ್ಧವಾದರೆ ಮಂಗಳೂರಿನಲ್ಲಿ ಅಂದರೆ, ಕುಡ್ಲದಲ್ಲಿ ಮಂಗಳೂರು ದಸರಾ ಅತ್ಯಂತ ಪ್ರಸಿದ್ಧ. ಮಂಗಳೂರು ಮಾತ್ರವಲ್ಲ, ಮಂಗಳೂರಿನ ಸುತ್ತಮತ್ತಲಿನ ಸ್ಥಳಗಳಲ್ಲೂ ಇದು ಪ್ರಸಿದ್ಧ. ಪ್ರತೀ ವರ್ಷ ವಿಜಯದಶಮಿ ದಿನದಂದು ಇಲ್ಲಿ ಅದ್ಧೂರಿಯಾಗಿ ಅಂದರೆ ಮೈಸೂರಿನಷ್ಟು ಅಲ್ಲದಿದ್ದರೂ, ಜನರು ಬಾಯಿ ಮೇಲೆ ಕೈಯಿಟ್ಟು ನೋಡುವಷ್ಟರ ಮಟ್ಟಿಗೆ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಕೋಟಿಗಟ್ಟಲೆ ಖರ್ಚು ಮಾಡಿ ಆಚರಿಸಲಾಗುವ ಏಕೈಕ ದಸರಾ ಹಬ್ಬವೇ ಈ ಮಂಗಳೂರು ದಸರಾ.
ಮಂಗಳೂರಿನ ಪ್ರಮುಖ ದೇವಿ ದೇವಾಲಯಗಳಾದ ಮಂಗಳಾದೇವಿ ಮತ್ತು ಇತರ ಕೆಲವು ದೇವಾಲಯಗಳು ಸಹ ನವರಾತ್ರಿ ಹಬ್ಬವನ್ನು ಆಚರಿಸುತ್ತವೆಯಾದರೂ, ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿನ ಆಚರಣೆಯು ಅತ್ಯಂತ ವಿಶೇಷವಾಗಿದೆ. ನವರಾತ್ರ ಆರಂಭದಿಂದ ವಿಜಯದಶಮಿಯವರೆಗೆ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ದುರ್ಗಾ ದೇವಿಯ 9 ರೂಪದ 9 ವಿಗ್ರಹಗಳನ್ನಿಟ್ಟು ಪೂಜೆಯನ್ನು ಮಾಡಲಾಗುತ್ತದೆ.
ದುಷ್ಟರನ್ನು ಸಂಹರಿಸಲು ಅವತಾರ ತಾಳಿದ ಜಗನ್ಮಾತೆಯ ಒಂಭತ್ತು ಸ್ವರೂಪಗಳಿಗೆ ಅದರದ್ದೇ ಆದ ಮಹತ್ವವಿದೆ. ಮಾತೆಯ ಸ್ವರೂಪಗಳನ್ನು ಆರಾಧಿಸುವುದರಿಂದ ಸಕಲ ಸಂಕಷ್ಟಗಳು ದೂರವಾಆಗಿ ಸುಖ-ಶಾಂತಿ, ನೆಮ್ಮದಿಯನ್ನು ಕಾಣಬಹುದಾಗಿದೆ.
ನವರಾತ್ರಿಯ ಒಂಭತ್ತು ದಿನಗಳು ದೇವಿಯನ್ನು ಭಕ್ತಿಯಿಂದ ಆರಾಧಿಸಿದಲ್ಲಿ ಅಂಥವರ ಮನಸ್ಸು ಶರೀರದ ಬೇರೆ ಬೇರೆ ಚಕ್ರಗಳಲ್ಲಿ ಸ್ಥಿತವಾಆಗುತ್ತದೆ. ದೇವಿಯ ಒಂಭತ್ತು ಸ್ವರೂಪಗಳಲ್ಲಿ ನವರಾತ್ರಿಯ ಮೊದಲನೇ ದಿನ ಶೈಲಪುತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ.
ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ತಪಸ್ಸನ್ನು ಕಟ್ಟುನಿಟ್ಟಾಗಿ ಆಚರಿಸಿರುವ ಕಾರಣದಿಂದ ಬ್ರಹ್ಮಚಾರಿಣಿ ಎಂದು ಕರೆಯುತ್ತಾರೆ. ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಪೂಜಿಸಲಾಗುತ್ತದೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ.
ಈ ದೇವಿಯ ಘಂಟೆಯ ಧ್ವನಿಯಿಂದ ದುಷ್ಟಶಕ್ತಿಗಳೆಲ್ಲ ಹೆದರಿ ನಾಶವಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ದೇವಿಯ ಕೂಷ್ಮಾಂಡಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಸೃಷ್ಟಿಯಲ್ಲಿ ಎಲ್ಲೆಡೆ ಅಂಧಕಾರವಿದ್ಧ ಸಮಯದಲ್ಲಿ ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು ರಚಿಸಿರುವ ದೇವಿಯ ಈ ಸ್ವರೂಪವನ್ನು ಕೂಷ್ಮಾಂಡಾ ಎಂದು ಕರೆಯುತ್ತಾರೆ.
ನವರಾತ್ರಿಯ ಐದನೇ ದಿನ ದೇವಿ ದುರ್ಗೆಯನ್ನು ಸ್ಕಂದಮಾತೆಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ನಾಲ್ಕು ಭುಜವುಳ್ಳ ತಾಯಿಯ ಬಲಬದಿಯ ಮೇಲಿನ ಭುಜದಿಂದ ಪುತ್ರ ಸ್ಕಂದನನ್ನು ಹಿಡಿದಿರುವ ಕಾರಣ ಸ್ಕಂದ ಮಾತೆ ಎಂದು ಕರೆಯುತ್ತಾರೆ. ನವರಾತ್ರಿಯ ಆರನೇ ದಿನ ದೇವಿಯ ಕಾತ್ಯಾಯನಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾತ್ಯಾಯನ ಖುಷಿಯ ಆಶ್ರಮದಲ್ಲಿ ಜನ್ಮತಾಳಿದ ಕಾರಣ ಕಾತ್ಯಾಯನಿ ಎಂದು ಕರೆಯಲಾಗುತ್ತದೆ. ನವರಾತ್ರಿಯ ಏಳನೇ ದಿನ ದೇವಿಯ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ದೇವಿಯ ಸ್ವರೂಪ ಅತ್ಯಂತ ಭಯಾನಕವಾಗಿದ್ದರೂ, ಈಕೆಯ ಆರಾಧನೆಯಿಂದ ಶುಭಫಲವನ್ನು ಪಡೆಯಬಹುದಾಗಿದೆ.
ನವರಾತ್ರಿಯ ಎಂಟನೇ ದಿನ ದೇವಿಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿ ಸ್ವರೂಪವನ್ನು ಅನ್ನಪೂರ್ಣೆ ಎಂದು ಸಹ ಕರೆಯಲಾಗುತ್ತದೆ. ನವರಾತ್ರಿಯ ನವಮಿಯ ಅಂದರೆ ಒಂಬತ್ತನೇ ದಿನ ದೇವಿಯ ಸಿದ್ಧಿಧಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಸಮಸ್ತ ಕಾರ್ಯಗಳಿಗೆ ಸಿದ್ಧಿಯನ್ನು ಪ್ರಧಾನ ಮಾಡುವ ಸ್ವರೂಪವಾಗಿದೆ. ದೇವಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ.
ಮಂಗಳೂರು ದಸರಾ ಉತ್ಸವದಲ್ಲಿ ಮೈಸೂರು ದಸರಾದಲ್ಲಿ ಬಳಸುವಂತೆ ಯಾವುದೇ ಆನೆಗಳನ್ನಾಗಲಿ, ಚಿನ್ನದ ವಿಗ್ರಹ ಹೊತ್ತು ಗಜಪಡೆಗಳಾಗಲಿ, ರಾಜ-ರಾಣಿಯಾಗಲಿ ಇರುವುದಿಲ್ಲ. ಇಲ್ಲಿ ಕೇವಲ ದುರ್ಗಾ ದೇವಿಯ ಮುಖ್ಯ ವಿಗ್ರಹ, ನವದುರ್ಗೆಯರ ವಿಗ್ರಹ, ಪಿಲಿ ನಲಿಕೆ ತಂಡ ಇನ್ನಿತರ ಸಾಂಸ್ಕೃತಿಕ ಕಲೆಗಳನ್ನು ಪ್ರತಿಬಿಂಬಿಸುವ ವಿವಿಧ ಗುಂಪುಗಳು, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇನ್ನು ಅನೇಕ ವಿವಿಧ ಗುಂಪುಗಳು, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇನ್ನು ಅನೇಕ ವಿವಿಧ ಹಾಗೂ ವಿಭಿನ್ನ ರೀತಿಯ ಆಚರಣೆಗಳನ್ನು ನಡೆಸಲಾಗುತ್ತದೆ.
ಮಂಗಳೂರಿನ ಬಹುತೇಕ ರಸ್ತೆಗಳಾದ ಎಂ.ಜಿ. ಎರ್‍ತೆ, ಕೆ.ಎಸ್. ರಾವ್ ರಸ್ತೆ, ಕಾರ್‌ಸ್ಟ್ರೀಟ್, ಜಿಹೆಚ್‌ಎಸ್ ರಸ್ತೆಗಳು ದೇವಿಯ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟಿರುತ್ತದೆ. ವಿಜಯ ದಶಮಿಯಂದು ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆಯು ಪ್ರಾರಂಭವಾಗಿ ಮಹಾಗಣಪತಿ ಮತ್ತು ನವದುರ್ಗೆಯರ ಜೊತೆಗೆ ಶಾರದಾದೇವಿಯ ಅಲಂಕೃತ ವಿಗ್ರಹ ಸುಮಾರು ನೂರಾರು ಟ್ಯಾಬ್ಲೋಗಳು, ಹುಲಿ ಕುಣಿತ, ಗೊಂಬೆಗಳು ಮತ್ತು ವಿವಿಧ ವೇಷಗಳೊಂದಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ ಅದೇ ಸ್ಥಳದಲ್ಲಿ ದೇವಾಲಯದ ಸಂಕೀರ್ಣದಲ್ಲಿರುವ ಪುಷ್ಕರಣಿ ಕೊಳದಲ್ಲಿ ವಿಗ್ರಹಗಳ ವಿಸರ್ಜನೆಯೊಂದಿಗೆ ದಸರಾ ಉತ್ಸವ ಕೊನೆಗೊಳ್ಳುತ್ತದೆ.
ಅದೇ ರೀತಿ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನ, ಮಂಗಳದೇವಿ ಮತ್ತು ಮಾರಿಗುದಿ ದೇವಸ್ಥಾನದಲ್ಲಿಯೂ ದಸರಾ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ,

-ಮಹಿಮಾ ನಿರಂಜನ್ ಪಿ.
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article