ವಿಧಾನ ಪರಿಷತ್ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ನಾಮಪತ್ರ ಸಲ್ಲಿಕೆ
ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ನಾಮಪತ್ರ ಸಲ್ಲಿಸಿದರು
ಬಳಿಕ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಗ್ರಾಪಂ, ತಾಲೂಕು ಪಂಚಾಯ್ತಿ ಸದಸ್ಯನಾಗಿ, ಜಿಲ್ಲಾ ಪಂಚಾಯ್ತಿಯಲ್ಲಿ 2 ಬಾರಿ ಸದಸ್ಯನಾಗಿ, ಜಿಪಂ ಅಧ್ಯಕ್ಷನಾಗಿ ಸ್ಥಳೀಯ ಸಂಸ್ಥೆಗಳ ಅರಿವು ಇರುವುದರಿಂದ ಇದೀಗ ವಿಧಾನ ಪರಿಷತ್ನಲ್ಲಿ ಈ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವಕಾಶ ದೊರೆತಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಓಟು ಹಾಕುವವರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು. ಯಾರು ಗೆದ್ದು ಬಂದರೆ ತಮಗೆ ನ್ಯಾಯ ಸಿಗಲಿದೆ ಎನ್ನುವ ಅರಿವು ಮತದಾರರಿಗೆ ಇದೆ. ಮತದಾರರ ಒಲವು ನನ್ನ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 30 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದು ಕೆಲಸ ಮಾಡಿದ್ದೇನೆ. ಆ ನೆಲೆಯಲ್ಲಿ ಪಕ್ಷ ನನ್ನನ್ನು ಗುರುತಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ ಎಂದರು.
ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಯಿತು. ನನ್ನ ಅವಧಿಯಲ್ಲಿ ಎಲ್ಲ ಗ್ರಾಪಂಗಳ ಕಂಪ್ಯೂಟರೀಕರಣ ಸಾಧ್ಯವಾಯಿತು. ಇನ್ನು ಮುಂದಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಮೂಲ ಸೌಕರ್ಯ ಸೇರಿದಂತೆ ಎಲ್ಲ ಅಗತ್ಯತೆಗಳನ್ನು ಪೂರೈಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ'ಸೋಜಾ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಬಿ. ರಮಾನಾಥ ರೈ ಉಪಸ್ಥಿತರಿದ್ದರು.
ಎಂಟು ನಾಮಪತ್ರ ಸಲ್ಲಿಕೆ..
ವಿಧಾನಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಒಟ್ಟು 8 ನಾಮಪತ್ರಗಳು ಸಲ್ಲಿಕೆಯಾಗಿವೆ.
ಗುರುವಾರ 7 ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣಾಧಿಕಾರಿಯಾಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ನಾಮಪತ್ರವನ್ನು ಸ್ವೀಕರಿಸಿದರು.