
ಶಕ್ತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
Tuesday, October 22, 2024
ಮಂಗಳೂರು: ಮಂಗಳೂರಿನ ತಲಪಾಡಿಯ ದೇವಿನಗರದಲ್ಲಿರುವ ಶಾರದ ವಿದ್ಯಾಲಯದಲ್ಲಿ ವಿದ್ಯಾಭಾರತಿ ಕರ್ನಾಟಕ ಹಾಗೂ ಶಾರದ ಸಮೂಹ ಸಂಸ್ಥೆಗಳು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಪ್ರಾಂತ ಹಾಗೂ ಕ್ಷೇತ್ರೀಯ ಮಟ್ಟದ ಜ್ಞಾನ ವಿಜ್ಞಾನ ಮೇಳ ಇದೇ ಅಕ್ಟೋಬರ್ 15 ರಿಂದ 20ರ ವರೆಗೆ ನಡೆಯಿತು.
ಹಲವಾರು ಶಾಲೆಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಶಾಸ್ತಾ ನಾಕ್ ವಿ., 8ನೇ ತರಗತಿ ವಿಜ್ಞಾನ ಸಂಶೋಧನಾ ವಸ್ತು ಪ್ರದರ್ಶನದಲ್ಲಿ ಜಿಲ್ಲೆ, ರಾಜ್ಯ ಮತ್ತು ಕ್ಷೇತ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು 13 ರಿಂದ 16 ನವೆಂಬರ್ 2024ರ ಜಯಪುರ ರಾಜಸ್ಥಾನದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ 10ನೇ ತರಗತಿಯ ಬೀರೇಶ್ ಗೌಡ ಗಣಿತ ಪ್ರಯೋಗದಲ್ಲಿ ಜಿಲ್ಲಾ, ರಾಜ್ಯ ಮತ್ತು ಕ್ಷೇತ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು 19 ರಿಂದ 22 ನವೆಂಬರ್ 2024ರ ಒರಿಸ್ಸಾ ಪುರಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಭಾರತೀಯ ಗಣಿತ ಮೇಳಕ್ಕೆ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಕಾರ್ಯದರ್ಶಿ ಸಂಜಿತ್ ನಾಕ್. ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅಭಿನಂದಿಸಿದರು.