
ಸುರತ್ಕಲ್‌ನಲ್ಲಿ ಕೊಳಗೇರಿ ಆಗ್ತಾ ಇದೆ ಸುಭಾಷಿತ ನಗರ..!
ಮಂಗಳೂರು: ಇಲ್ಲಿಗೆ ಸಮೀಪದ ಸುಭಾಷಿತ ನಗರ ದಿನ ಕಳೆದಂತೆ ಕೊಳಗೇರಿಗಿಂತಲೂ ಕಡೆಯಾಗುತ್ತಿದೆ. ಇದಕ್ಕೆ ಕಾರಣ ಹೋಟೆಲ್, ಅಪಾರ್ಟ್ಮೆಂಟ್‌ಗಳಿಂದ ಹರಿದು ತೋಡು ಸೇರುತ್ತಿರುವ ತ್ಯಾಜ್ಯ ಮತ್ತು ಕೊಳಕು ನೀರು. ಈ ಬಗ್ಗೆ ಸಂಬಂಧಪಟ್ಟ ಮಹಾನಗರ ಪಾಲಿಕೆ, ಸ್ಥಳೀಯ ಕಾರ್ಪೋರೇಟರ್‌ಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಅನ್ನುವುದು ಇಲ್ಲಿನ ನಿವಾಸಿಗಳ ದೂರು.
ಕಾನ ಕಟ್ಲ, ಮಾಲೆಮಾರ್ ಅಪಾರ್ಟ್ಮೆಂಟ್‌ಗಳ ತ್ಯಾಜ್ಯ ಮತ್ತು ಕೊಳಕು ನೀರು ಇಲ್ಲಿ ಹರಿದು ಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿನ ಒಂದನೇ ಬ್ಲಾಕ್‌ಗೆ ಪರಿಸರದ ಹೋಟೆಲ್‌ನಿಂದ ತ್ಯಾಜ್ಯ ನೀರು ಹರಿದು ಬರುತ್ತಿದ್ದು ವಾಸನೆಯಿಂದ ಮೂಗು ಮುಚ್ಚಿಕೊಂಡು ದಿನ ಸಾಗಿಸುವಂತಾಗಿದೆ. ಮಳೆ ನೀರು ಹರಿಯುವ ತೋಡಿನಲ್ಲಿ ತ್ಯಾಜ್ಯ ಹರಿಯುತ್ತಿದ್ದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ. ಇದರಿಂದ ಮಲೇರಿಯಾ, ಡೆಂಗ್ಯೂ ನಂತಹ ಮಾರಣಾಂತಿಕ ಕಾಯಿಲೆ ಹರಡುವ ದಿನ ದೂರವಿಲ್ಲ. ಇಲ್ಲಿ ಕಾಶಿಮಠದಿಂದ ಬರುವ ನೀರು ಮತ್ತು ತಡಂಬೈಲ್ ನಲ್ಲಿರುವ ಅಪಾಟ್೯ಮೆಂಟ್‌ನ ನೀರು ಇಲ್ಲಿ ಸಣ್ಣ ತೋಡಿನ ಮೂಲಕ ಬರುತ್ತಿದೆ. ಜೊತೆಗೆ ರಚನಾ ಹೋಟೆಲ್‌ನ ತ್ಯಾಜ್ಯ ಮತ್ತು ಕೊಳಕು ನೀರು ಈ ತೋಡಿಗೆ ಬಿಡುತ್ತಾರೆ.
ಆದೇ ರೀತಿ ಇಲ್ಲಿನ ಏಳನೇ ಬ್ಲಾಕ್‌ನಲ್ಲೂ ಸಮಸ್ಯೆ ಉದ್ಭವವಾಗಿದ್ದು ಕಾನ ಕಟ್ಲದಲ್ಲರುವ ಅಪಾರ್ಟ್ಮೆಂಟ್‌ಗಳ ತ್ಯಾಜ್ಯ, ಕೊಳಕು ನೀರು ತೋಡು ಸೇರುತ್ತಿದೆ. ಈಗಾಗಲೇ ಇಲ್ಲಿನ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಷನ್ ಸಂಬಂಧಪಟ್ಟ ಇಲಾಖೆ, ಎರಡನೇ ಮತ್ತು ಏಳನೇ ವಾರ್ಡ್ ಕಾರ್ಪೋರೇಟರ್ ಅವರಿಗೆ ಸಮಸ್ಯೆ ವಿವರಿಸಿದ್ದಾರೆ. ಆದರೆ ತ್ಯಾಜ್ಯ ನೀರು ಹರಿಯುವ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆಯೇ ಹೊರತು ಕಡಿಮೆಯಾಗಿಲ್ಲ. ಕೂಡಲೇ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಅನ್ನುವುದು ಜನರ ಮಾತಾಗಿದೆ.