‘ದಸರಾ ಶೋಭಾಯಾತ್ರೆ ನಾಡಿಗೆ ಶೋಭೆ’: ಎಚ್.ಎಸ್. ಸಾಯಿರಾಂ
ಮಂಗಳೂರು: ಮಂಗಳೂರು ದಸರಾ ಮಹೋತ್ಸವ ಶೋಭಾಯಾತ್ರೆ ಕರಾವಳಿ ಜಿಲ್ಲೆ, ನಾಡಿಗೆ ಶೋಭೆಯಾಗಿದೆ. ಈ ಬಾರಿಯ ಶೋಭಾಯಾತ್ರೆಯಲ್ಲಿ ರಾಜ್ಯದ ನಾನಾ ಕಡೆಯಿಂದ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಇದಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹೇಳಿದರು.
ಮಂಗಳೂರು ದಸರಾ ಮಹೋತ್ಸವದ ಶೋಭಾಯಾತ್ರೆ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಕುದ್ರೋಳಿ ಕ್ಷೇತ್ರದ ಸಭಾಂಗಣದಲ್ಲಿ ಟ್ಯಾಬ್ಲೋ ತಂಡಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುದ್ರೋಳಿ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್. ವೈಭವದ ಮೆರವಣಿಗೆಯಲ್ಲಿ ಸಾಧ್ಯವಾದಷ್ಟು ನೆಲದ ಸಂಸ್ಕೃತಿ, ಪರಂಪರೆ ಬಿಂಬಿಸುವ ಟ್ಯಾಬ್ಲೋಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಮಂಗಳೂರು ದಸರಾ ಈ ರೀತಿ ಯಶಸ್ಸು ಕಂಡಿದ್ದರೆ ಟ್ಯಾಬ್ಲೋದ ಸಂಘಟನೆಗಳ ಪಾತ್ರ, ಕೊಡುಗೆ ಹಿರಿದು. ಅದೇ ರೀತಿ ಮುಂದುವರಿಸಿಕೊಂಡು ಹೋಗೋಣ ಎಂದರು.
ದೇವಳದ ಟ್ರಸ್ಟಿ ರವಿಶಂಕರ್ ಮಿಜಾರು ಮಾತನಾಡಿ, ಅ.13ರಂದು ವೈಭವದ ಶೋಭಾಯಾತ್ರೆ ನಡೆಯಲಿದ್ದು, ಶೋಭಾಯಾತ್ರೆ ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದಸರಾ ಮೆರವಣಿಗೆಯೂ ಸುಸಾಂಗವಾಗಿ ನಡೆಸುವ ದೃಷ್ಟಿಯಿಂದ ದೇವಸ್ಥಾನದ ಆಡಳಿತ ಮಂಡಳಿ ಕೆಲವೊಂದು ಮಾರ್ಗಸೂಚಿಗಳನ್ನು ನೀಡುತ್ತಿದ್ದು, ಅದಕ್ಕೆ ಬದ್ಧರಾಗಿ ನಡೆಯೋಣ ಎಂದರು.
ದೇವಸ್ಥಾನದ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಜಗದೀಪ್ ಡಿ. ಸುವರ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ ಉಪಸ್ಥಿತರಿದ್ದರು.
ಪೊಲೀಸ್ ಅಧಿಕಾರಿಗಳ ಸಲಹೆ: ಮಂಗಳೂರು ನಗರ ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ವಿನಾಯಕ್ ತೋರಟ್, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ದರು ಇನ್‌ಸ್ಪೆಕ್ಟರ್ ಅಝ್ಮತ್ ಆಲಿ ಶೋಭಾಯಾತ್ರೆ ಯಶಸ್ಸಿಗೆ ಸಲಹೆ ನೀಡಿದರು.