ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಜನಜಾಗೃತಿಯೂ ನಿಷೇಧವೇ?: ಶಾಸಕ ಕಾಮತ್
ಮಂಗಳೂರು: ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ ಅವರ ಮೇಲೆ ದ್ವೇಷ ಭಾಷಣ, ಕೋಮು ಪ್ರಚೋದನೆ ಆರೋಪ ಹೊರಿಸಿ ಮಂಗಳೂರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದು ರಾಜ್ಯ ಸರ್ಕಾರವನ್ನು ತೃಪ್ತಿಪಡಿಸಲು ಹೊರಟಿರುವ ಲಕ್ಷಣವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಾ. ಅರುಣ್ ಉಳ್ಳಾಲ ಅವರು ನೀಡಿರುವ ಹೇಳಿಕೆಯಲ್ಲಿ ತಪ್ಪೇನಿದೆ? ಹಿಂದೂಗಳು ವಿದ್ಯಾರ್ಜನೆಗೆ ಹಿಂದೂ ವಿದ್ಯಾ ಸಂಸ್ಥೆಗಳನ್ನು, ಮದುವೆಯಂತಹ ಶುಭ ಸಮಾರಂಭಗಳಿಗೆ ಹಿಂದೂ ಕಲ್ಯಾಣ ಮಂಟಪಗಳನ್ನು ಬಳಸಬೇಕು ಎನ್ನುವುದು ಯಾವ ರೀತಿಯಲ್ಲಿ ದ್ವೇಷ ಭಾಷಣ? ಯಾವ ರೀತಿಯಲ್ಲಿ ಕೋಮು ಪ್ರಚೋದನೆ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂಗಳು, ಹಿಂದೂ ಸಮಾಜವನ್ನು ಜಾಗೃತಗೊಳಿಸುವುದನ್ನೇ ನಿಷೇಧಿಸಲಾಗಿದೆಯೇ? ರಾಜ್ಯದ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ಎಂದು ದ್ವೇಷ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದವರು ಇಂದು ತೋರಿರುವ ಉತ್ಸಾಹವನ್ನು ಗಮನಿಸಿದಾಗ ಇದರ ಹಿಂದೆ ಹಿಂದೂ ಪರ ಧ್ವನಿಯನ್ನು ಹತ್ತಿಕ್ಕುವ ಕಾಂಗ್ರೆಸ್ ಸರ್ಕಾರದ ಛಾಯೆ ಇರುವುದಂತೂ ಸ್ಪಷ್ಟ ಎಂದರು.
ಹಿಂದೂಗಳನ್ನು ಗುರಿಯಾಗಿಸಿಕೊಂಡು ಕೇಸು ದಾಖಲಿಸುವುದು, ದಬ್ಬಾಳಿಕೆ ನಡೆಸುವುದು, ಬೆದರಿಸುವುದನ್ನು ಬಿಜೆಪಿ ಸಹಿಸುವುದಿಲ್ಲ. ಈ ಕೂಡಲೇ ಡಾ. ಅರುಣ್ ಉಳ್ಳಾಲ ಅವರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.