ಸಿಎಂ ಸಿದ್ದರಾಮಯ್ಯನವರು ರಾಜಿನಾಮೆ ನೀಡುವ ಕಾಲ ಸನ್ನಿಹಿತಹಾಗಿದೆ: ಶಾಸಕ ವೇದವ್ಯಾಸ ಕಾಮತ್
Tuesday, October 1, 2024
ಮಂಗಳೂರು: ಮೂಡ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದ್ದು, ಇಷ್ಟು ದಿನ ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುತ್ತಾ ಇದೀಗ ಪ್ರಕರಣ ಬಿಗಿಯಾಗುತ್ತಾ ಹೋದಂತೆ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ಬೇಷರತ್ತಾಗಿ ತಮ್ಮ ಪತ್ನಿಯವರಿಂದ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ಹೇಳಿದರು.
ಇದು ಬಿಜೆಪಿ-ಜೆಡಿಎಸ್ ಸಂಘಟಿತವಾಗಿ ನಡೆಸಿದ ‘ಮೈಸೂರು ಚಲೋ’ ಪಾದಯಾತ್ರೆಗೆ ಸಿಕ್ಕಿರುವ ಜಯವಾಗಿದೆ. ಬಡವರ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದು ಮಾತ್ರವಲ್ಲದೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವುಂಟು ಮಾಡಿದ್ದ ಈ ಪ್ರಕರಣದಲ್ಲಿ ಅಕ್ರಮದ ದಾಖಲೆಗಳು ಕಣ್ಣಿಗೆ ರಾಚುತ್ತಿದ್ದರೂ, ನಾನು ಯಾರಿಗೂ ಜಗ್ಗಲ್ಲ ಬಗ್ಗಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯನವರನ್ನು ಇದೀಗ ನ್ಯಾಯ ವ್ಯವಸ್ಥೆಯೇ ತಲೆಬಾಗಿಸಿದೆ. ಅದುವೇ ಈ ದೇಶದ ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಯ ಶಕ್ತಿ ಎಂದರು.
ಸಿದ್ದರಾಮಯ್ಯನವರು ಇನ್ನಾದರೂ ತಮ್ಮ ಮೊಂಡು ಹಠ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪ್ರಾಮಾಣಿಕವಾಗಿ ತನಿಖೆ ಎದುರಿಸಲಿ, ಅದರ ಜೊತೆಗೆ ರಾಜ್ಯಪಾಲರನ್ನು ಅವಹೇಳನ ಮಾಡಿದ ತಪ್ಪಿಗೆ ಇಡೀ ರಾಜ್ಯ ಕಾಂಗ್ರೆಸ್ ಸರ್ಕಾರ ಕ್ಷಮಾಪಣೆ ಕೋರಲಿ ಎಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.