ಕಲ್ಕೂರ ಪ್ರತಿಷ್ಠಾನದಿಂದ ನಾಟ್ಯ ವಿದುಷಿ ಕಮಲಾ ಭಟ್‌ರವರಿಗೆ  ‘ರಾಜ್ಯೋತ್ಸವ ಗೌರವ’ ಪ್ರದಾನ

ಕಲ್ಕೂರ ಪ್ರತಿಷ್ಠಾನದಿಂದ ನಾಟ್ಯ ವಿದುಷಿ ಕಮಲಾ ಭಟ್‌ರವರಿಗೆ ‘ರಾಜ್ಯೋತ್ಸವ ಗೌರವ’ ಪ್ರದಾನ


ಮಂಗಳೂರು: ನಾಟ್ಯಾಲಯ ಉರ್ವ(ರಿ.) ಇದರ ನಿರ್ದೇಶಕಿ, ಕರ್ನಾಟಕ ಕಲಾಶ್ರೀ ವಿದುಷಿ ಕಮಲಾ ಭಟ್ ಅವರಿಗೆ ಕಲ್ಕೂರ ಪ್ರತಿಷ್ಠಾನದಿಂದ ‘ಕನ್ನಡ ರಾಜ್ಯೋತ್ಸವ ಗೌರವ’ವನ್ನು ನ.1 ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಲಾಗುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಂತಲಾ ಪ್ರಶಸ್ತಿ ಪುರಸ್ಕೃತ ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಅವರಿಂದ ನೃತ್ಯಾಭ್ಯಾಸವನ್ನು ಕಲಿತು ಸಾಧನೆಗೈದಿರುವ ಎಪ್ಪತ್ತರ ಹರೆಯದ ಕಮಲಾ ಭಟ್ ಓರ್ವ ಯಶಸ್ವೀ ನೃತ್ಯಗುರು ಎನಿಸಿಕೊಂಡಿರುವರು. ಇವರಿಂದ ತರಬೇತಿ ಪಡೆದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಸ್ತ್ರೀಯ ಭರತನಾಟ್ಯದಲ್ಲಿ ವಿದ್ವತ್ ಗ್ರೇಡ್ ನೃತ್ಯಗುರುಗಳಾಗಿ ರಾಜ್ಯ-ದೇಶ-ವಿದೇಶಗಳಲ್ಲಿ ಕನ್ನಡ ಸಂಸ್ಕೃತಿಯ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.

ಕಳೆದ 45 ವರ್ಷಗಳಿಂದ ಕರಾವಳಿ ಜಿಲ್ಲೆಯ ಭರತನಾಟ್ಯ ವಲಯದಲ್ಲಿ ಸಮರ್ಪಣಾ ಮನೋಭಾವದಿಂದ ಭರತನಾಟ್ಯ ಕಲೆಯನ್ನು ನೂರಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವ ಕಮಲಾ ಭಟ್ ಪಂದನಲ್ಲೂರು ಶೈಲಿಯಲ್ಲಿ ಪರಿಣಿತಿ ಹೊಂದಿರುವ ಅಂತರ್‌ರಾಜ್ಯ ಕಲಾಗುರು ಎಂಬ ಮಾನ್ಯತೆ ಪಡೆದಿರುವರು. ಆಕಾಶವಾಣಿ, ದೂರದರ್ಶನ ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ಇವರದಾಗಿದೆ.

ಆಧುನಿಕ ಕಾಲದ ಈ ಸ್ಪರ್ಧಾ ಯುಗದಲ್ಲಿ ಭಾರತೀಯ ಸಾಂಪ್ರದಾಯಿಕ ಪರಂಪರೆಯನ್ನು ಪೋಷಿಸುತ್ತಾ, ಹೊಸತನ್ನು ಅಳವಡಿಸಿಕೊಂಡು ನೃತ್ಯ ಪ್ರಾಕಾರಕ್ಕೆ ನವಚೈತನ್ಯವನ್ನು ತುಂಬುತ್ತಿರುವ ಕಮಲಾ ಭಟ್‌ರವರು ಶ್ರೀರಾಮ ವಿಠ್ಠಲ ಪ್ರಶಸ್ತಿ (ಪೇಜಾವರ ಶ್ರೀಗಳಿಂದ), ನಾಟ್ಯಕಲಾನಿಧಿ ಪ್ರಶಸ್ತಿ ಸಹಿತ ಅನೇಕ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article