ಮಾನಸಿಕ ಅಸ್ವಸ್ಥರ ಮೇಲೆ ದಯೆ ಇರಲಿ: ನ್ಯಾಯಾಧೀಶೆ ಶೋಭಾ ಬಿ.ಜಿ.

ಮಾನಸಿಕ ಅಸ್ವಸ್ಥರ ಮೇಲೆ ದಯೆ ಇರಲಿ: ನ್ಯಾಯಾಧೀಶೆ ಶೋಭಾ ಬಿ.ಜಿ.


ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಪಡುವವರನ್ನು ಎಲ್ಲರಂತೆ ಕಾಣಿರಿ. ಅವರ ಮೇಲೆ ದಯೆ ಮತ್ತು ಕರುಣೆ ಇರಲಿ. ಅವರನ್ನು ನಮ್ಮಂತೆ ಉಪಚರಿಸಿ, ನಿರ್ಲಕ್ಷ್ಯ ಮಾಡದಿರಿ ಎಂದು ಸಿವಿಲ್ ನ್ಯಾಯಾಧೀಶೆ ಮತ್ತು ದಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ತಿಳಿಸಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯ ಮಾನಸಿಕ ಆರೋಗ್ಯ ಏರುಪೇರಾದರೆ ಯಾರೂ ಗಮನ ಹರಿಸುವುದಿಲ್ಲ. ಮಾನಸಿಕ ಅಸ್ವಸ್ಥತೆಯನ್ನು ಸುಧಾರಿಸಲು ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅವರಿಗೆ ಬೇಕಾದ ಕಾನೂನು ರೀತಿಯ ತಿಳಿವಳಿಕೆ ಸಮಾಜದ ಎಲ್ಲರಲ್ಲೂ ಇರಬೇಕು. ಈ ನಿಟ್ಟಿನಲ್ಲಿ ಕಾನೂನು ಪ್ರಾಧಿಕಾರ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ಬದ್ಧವಾಗಿದೆ ಎಂದು ಹೇಳಿದರು.

ವ್ಯಕ್ತಿಯೊಬ್ಬನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕವಾಗಿ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ಹಾಗಾಗಿ ಸಮಾಜದ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವಂತಾಗಲಿ ಎಂದು ದಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮನಸ್ಸಿನಲ್ಲೇಳುವ ವಿವಿಧ ತಲ್ಲಣಗಳ ಕಾರಣದಿಂದ ಆರೋಗ್ಯ ವಿಕೃತಿಯ ರೂಪಕ್ಕೆ ಬದಲಾಗುತ್ತಿದೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುವರು ಎಲ್ಲಾ ಕಡೆ ಇದ್ದಾರೆ. ಹಾಗಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರಲ್ಲೂ ಇರಲಿ ಎಂದು ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಮಾನಸಿಕ ಹಿಂಸೆ ಮತ್ತು ಒತ್ತಡಗಳು ಮಾನಸಿಕ ಅಸ್ವಸ್ಥತೆ ಉಂಟು ಮಾಡುತ್ತದೆ. ನ್ಯಾಯಸಮ್ಮತ ಬದುಕಿಗೆ ಇರುವ ಹಕ್ಕುಗಳನ್ನು ವಿದ್ಯಾರ್ಥಿಗಳು ತಿಳಿಯಬೇಕಿದೆ. ಸಮಸ್ಯೆ ಎದುರಾದ ನಂತರ ಬಾಧೆಪಡುವುದಕ್ಕಿಂತ ಮೊದಲೇ ಕಾನೂನಿನ ಅರಿವಿದ್ದರೆ ಯಾವುದೇ ತೊಂದರೆಗಳಾಗುವುದಿಲ್ಲ. ಈ ಕುರಿತು ಎಲ್ಲರಿಗೂ ತಿಳಿಸುವುದರಿಂದ ಸಾಕಷ್ಟು ಕುಟುಂಬಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮನಃಶಾಂತಿ ಮಾನಸಿಕ ಆರೋಗ್ಯ ಸಂಸ್ಥೆಯ ತಜ್ಞೆ ಡಾ. ರಮೀಳ ಶೇಖರ್, ದಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ ಶುಕರಾಜ್ ಎಸ್. ಕೊಟ್ಟಾರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಸುದರ್ಶನ್ ಸಿ.ಎಂ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞ ಡಾ. ಪ್ರಾಜಕ್ತ ವಿ. ರಾವ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಗಾಯತ್ರಿ ಎನ್. ಮತ್ತು ಡಾ. ಸುರೇಶ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article