ಅಂಬೇಡ್ಕರ್ ಹಾಗೂ ದಲಿತ ಸಮುದಾಯಕ್ಕೆ ನಿಂದನೆ: ದೂರು
ಮಂಗಳೂರು: ಉಮೇಶ್ ನಾಯ್ಕ್ ಎಂಬಾತ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ನಿಂದಿಸಿರುವ ಸಲುವಾಗಿ ದ.ಕ. ಜಿಲ್ಲಾ ದಲಿತ ಹಕ್ಕುಗಳ ಸಮಿತಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮೂಡಬಿದಿರೆ ಆಳ್ವಾಸ್ ಕಾಲೇಜ್‌ನ ನುಡಿಸಿರಿ ಸಭಾಂಗಣ ವಿದ್ಯಾಗಿರಿಯಲ್ಲಿ ನ.10 ರಂದು ನಡೆಯುವ ಕರಾವಳಿ ಮಾರಾಠಿ ಸಮಾವೇಶ ಕಾರ್ಯಕ್ರಮದ ಭಾಗವಾಗಿ ಉಮೇಶ್ ನಾಯ್ಕ್ ಅವರು ತಾನೊಬ್ಬ ಎಸ್‌ಟಿ ಎಂಬ ಪರಿಜ್ಞಾನವಿಲ್ಲದೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಸ್‌ಟಿ ಸಮುದಾಯದ ಅಭಿವೃದ್ಧಿಗೆಂದು ರೂಪಿಸಿದ ಎಲ್ಲಾ ಸವಲತ್ತುಗಳನ್ನು ಸರಕಾರದಿಂದ ಪಡೆದುಕೊಂಡ ಇವರು ದಲಿತೆ ನಿನ್ನ ಅಮ್ಮೆನಾ? (ದಲಿತ ನಿನ್ನ ಅಪ್ಪನಾ ?), ಅಂಬೇಡ್ಕರ್ ನಿನ್ನ ಕುಟುಂಬದಾಯೆನಾ? (ಅಂಬೇಡ್ಕರ್ ನಿನ್ನ ಕುಟುಂಬದವನಾ?), ಅಂಬೇಡ್ಕರ್ ನಿನ್ನ ಅಜ್ಜೆನಾ? (ಅಂಬೇಡ್ಕರ್ ನಿನ್ನ ಅಜ್ಜನಾ?) ಎಂದು ಏಕವಚನದಲ್ಲಿ ಉಚ್ಚಾರಿಸಿ ಮಾತನಾಡಿ ತಾನು ಹೇಳಿದ ಧ್ವನಿಸುರುಳಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜಾಲತಾಣದ ಗುಂಪುಗಳಿಗೂ ರವಾನಿಸುವಂತೆ ಹೇಳಿಕೆ ನೀಡಿರುವುದನ್ನು ದಲಿತ ಹಕ್ಕುಗಳ ಸಮಿತಿಯ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ ತೀವ್ರವಾಗಿ ಖಂಡಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿ ಮಾತನಾಡಿದ ಉಮೇಶ್ ನಾಯ್ಕ್ ಅವರ ವಿರುದ್ಧ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಅ.16 ರಂದು ಕಠಿಣ ಕ್ರಮಕ್ಕೆ ಒತ್ತಾಯಿಸಿ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ವತಿಯಿಂದ ದೂರು ನೀಡಲಾಗಿದೆ.
ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಕೊಣಾಜೆ, ಚಂದ್ರಶೇಖರ ಕಿನ್ಯಾ, ರಾಧಕೃಷ್ಣ ಬೊಂಡಂತಿಲ, ಉಮೇಶ್ ಮೂಡಬಿದಿರೆ, ವಿಶ್ವನಾಥ ಮಂಜನಾಡಿ ಮತ್ತು ಸ್ವಸ್ತಿಕ್ ಕಿನ್ಯಾ ಇದ್ದರು.