
ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹ
ಮಂಗಳೂರು: ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆದಷ್ಟು ಶೀಘ್ರ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ದೀಕ್ಷಿತಾ ಅವರು, ಮಂಗಳೂರು ವಿ.ವಿ. ಅಧೀನಕ್ಕೆ ಒಳಪಟ್ಟ ಎಂಎಸ್‌ಡಬ್ಲ್ಯೂ ವಿಭಾಗ ಇರುವ ಸರಕಾರಿ ಕಾಲೇಜುಗಳಲ್ಲಿ 15 ವಿದ್ಯಾರ್ಥಿಗಳು ಇದ್ದ ವಿಷಯಕ್ಕೆ ಮಾತ್ರ ಐಚ್ಛಿಕ (ಸ್ಪೆಷಲೈಝೆಶನ್) ನೀಡುವಂತೆ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ವಿಷಯ ಪಡೆದುಕೊಳ್ಳಲು ಸಾಧ್ಯವಾಗದೆ ದಿಕ್ಕು ತೋಚದಂತಾಗಿದೆ ಎಂದರು.
ನಗರದಲ್ಲಿ ಎಂಎಸ್‌ಡಬ್ಲ್ಯೂ ಸ್ನಾತಕೋತ್ತರ ವಿಭಾಗದ ದ್ವಿತೀಯ ವರ್ಷದಲ್ಲಿ ಮೂರರಲ್ಲಿ ಒಂದು ಐಚ್ಛಿಕ ವಿಷಯ (ಎಚ್.ಆರ್., ಮೆಡಿಕಲ್ ಫಿಸಿಯಾಟ್ರಿ, ಕಮ್ಯುನಿಟಿ ಡೆವಲಫ್‌ಮೆಂಟ್) ಪಡೆದುಕೊಳ್ಳಬೇಕು. ಸರಕಾರಿ ನಿಯಮದ ಪ್ರಕಾರ ಯಾವುದೇ ಕೋರ್ಸ್ ಅಥವಾ ಐಚ್ಛಿಕ ವಿಷಯಗಳಲ್ಲಿ 15 ವಿದ್ಯಾರ್ಥಿಗಳು ಇರಬೇಕೇ ಹೊರತು ಸ್ಪೆಷಲೈಝೆಶನ್‌ಗೆ ಈ ರೀತಿಯ ಯಾವುದೇ ನಿಯಮ ಇಲ್ಲ. ನನಗೆ ಎಚ್.ಆರ್. ಐಚ್ಛಿಕ ವಿಷಯ ಆಯ್ಕೆಗೆ ಆಸೆ ಇದೆ ಆದರೆ, ಈ ವಿಷಯಕ್ಕೆ 15 ವಿದ್ಯಾರ್ಥಿಗಳು ಇಲ್ಲ ಎಂದು ಈಗ ಬೇರೆ ಆಯ್ಕೆ ಮಾಡಬೇಕಿದೆ. ಸರಕಾರಿ ಕಾಲೇಜುಗಳಿಗೆ ಮಾತ್ರ ಈ ನಿಯಮ ಏಕೆ? ಈ ಸಮಸ್ಯೆಯಿಂದ ಮುಂದಿನ ದಿನಗಳಲ್ಲಿ ನಮ್ಮ ಉದ್ಯೋಗದ ಮೇಲೂ ಪರಿಣಾಮ ಎಂದವರು ಹೇಳಿದರು.
ನಮ್ಮ ಸಮಸ್ಯೆ ಇತ್ಯರ್ಥಗೊಳಿಸುವಂತೆ ಈಗಾಗಲೇ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ, ಈಡೇರಲಿಲ್ಲ. ಮನವಿ ಪರಿಗಣಿಸುವಂತೆ ಆಗ್ರಹಿಸಿ ಅ.23 ರಂದು ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ವಿದ್ಯಾರ್ಥಿ ನಿಖಿಲ್ ಅವರು ಹೇಳಿದರು.
ವಿದ್ಯಾರ್ಥಿಗಳಾದ ಪ್ರವೀಣ, ಸ್ವಾತಿ ಉಪಸ್ಥಿತರಿದ್ದರು.