
ರೈಲು ಹಳಿಯಲ್ಲಿ ಕಲ್ಲು-ವೇದವ್ಯಾಸ ಕಾಮತ್ ಹೇಳಿಕೆ ಹಾಸ್ಯಾಸ್ಪದ: ಸದಾಶಿವ ಉಳ್ಳಾಲ್
ಉಳ್ಳಾಲ: ತೊಕ್ಕೊಟ್ಟುವಿನ ರೈಲು ಹಳಿಗಳಲ್ಲಿ ಕಲ್ಲುಗಳನ್ನಿಟ್ಟ ಕಿಡಿಗೇಡಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರವು ಕ್ರಮ ಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಅವರು ತೊಕ್ಕೊಟ್ಟಿನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೈಲ್ವೇ ಇಲಾಖೆ ಮಾತ್ರವಲ್ಲದೆ ರೈಲ್ವೇ ಪೊಲೀಸರು ಕೂಡ ಕೇಂದ್ರ ಸರಕಾರದ ಅಧೀನಕ್ಕೆ ಬರುತ್ತಾರೆಂಬ ಕನಿಷ್ಠ ಜ್ಞಾನವಿಲ್ಲದೆ ಶಾಸಕರು ಕೂಲಂಕಷವಾಗಿ ತಿಳಿದು ಮಾತನಾಡಬೇಕು. ಉಳ್ಳಾಲ ಓವರ್ ಬ್ರಿಡ್ಜ್ ಸಮೀಪದ ಗಣೇಶ್ ನಗರ, ಕಾಪಿಕಾಡ್ ಬಳಿ ರೈಲ್ವೆ ಹಳಿಯಲ್ಲಿ ಕಲ್ಲುಗಳನ್ನಿಟ್ಟ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ರೈಲ್ವೆ ಹಳಿಯಲ್ಲಿ ಕಲ್ಲು ಇಟ್ಟಿರುವ ದುಷ್ಕರ್ಮಿಗಳ ಕೃತ್ಯ ಖಂಡನೀಯ. ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇದರ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಹುನ್ನಾರ ಸರಿಯಲ್ಲ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸದಸ್ಯ ಅಶ್ರಫ್ ಕೆ.ಸಿ ರೋಡ್ ಮಾತನಾಡಿ, ರೈಲ್ವೇ ಅಧಿಕಾರಿಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರ ಮಕ್ಕಳು ರೈಲ್ವೇ ಹಳಿಗಳಲ್ಲಿ ಕಲ್ಲುಗಳನ್ನು ಇಟ್ಟಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಆದರೆ ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ಬಿಜೆಪಿ ಅಧಿಕಾರದಲ್ಲಿರುವ ಹೊರ ರಾಜ್ಯಗಳಿಂದಲೇ ಹೆಚ್ಚಿನ ವಲಸೆ ಕಾರ್ಮಿಕರು ಇಲ್ಲಿಗೆ ಬರುತ್ತಿದ್ದಾರೆ. ಅವರ ಮಕ್ಕಳೇ ಹಳಿಗಳಲ್ಲಿ ಕಲ್ಲು ಇಟ್ಟಿರುವುದು ಎಷ್ಟು ಸತ್ಯವೆಂದು ಕೂಲಂಕುಷ ತನಿಖೆ ನಡೆಸಬೇಕು. ಇದೊಂದು ದೇಶದ್ರೋಹಿ ಕೃತ್ಯವೂ ಆಗಿರಬಹುದು. ಆದರೆ ಓರ್ವ ಜವಾಬ್ದಾರಿಯುತ ಶಾಸಕರು ಇಂತಹ ವಿಚಾರಗಳಲ್ಲಿ ಕಾಟಾಚಾರದ ರಾಜಕೀಯ ಹೇಳಿಕೆಗಳನ್ನು ಕೊಡಬಾರದು. ದೇಶದ ಭದ್ರತೆಗೆ ಧಕ್ಕೆ ತರುವ ದುಷ್ಕೃತ್ಯಗಳನ್ನು ಎಲ್ಲರೂ ಒಟ್ಟಾಗಿ ವಿರೋಧಿಸಬೇಕು. ಶಾಸಕ ವೇದವ್ಯಾಸ ಕಾಮತ್ ಅವರು ತೊಕ್ಕೊಟ್ಟಿನ ರೈಲ್ವೇ ಹಳಿಯ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ನಡುವಿಗೆಳೆದು ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ. ಇಷ್ಟಲ್ಲದೆ ದೇಶದಲ್ಲಿ ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಹೇಳಿಕೆ ನೀಡಿ ಒಂದು ಹೆಜ್ಜೆ ಮುಂದು ಹೋಗಿದ್ದಾರೆ. ದೇಶದಲ್ಲಿ ಬಿಜೆಪಿ ಸರಕಾರದ ಆಡಳಿತವೇ ನಡೆಯುತ್ತಿದೆ. ಇಷ್ಟಾದರೂ ಬಾಂಗ್ಲಾ ವಲಸಿಗರು ಇಲ್ಲಿದ್ದಾರೆಂದರೆ ವೈಫಲ್ಯ ಯಾರದ್ದು ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತವಿರುವ ಗುಜರಾತ್ ರಾಜ್ಯದ ಸೂರತ್‌ನಲ್ಲಿ ರೈಲ್ವೇ ಹಳಿಗಳನ್ನು ತಪ್ಪಿಸಿದ ಘಟನೆ ನಡೆದು ಆರೋಪಿಗಳನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲ್ವೇ ಹಳಿಗಳಲ್ಲಿ ಗ್ಯಾಸ್ ಸಿಲಿಂಡರ್ ಇಡಲಾಗಿದ್ದು ಆ ಪ್ರಕರಣದಲ್ಲೂ ಆರೋಪಿಗಳ ಬಂಧನ ನಡೆದಿತ್ತು. ದೇಶದ ಭದ್ರತೆಯ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯವಾಗಿ ನಡೆಸಿ ಯಾವುದೇ ಸಮುದಾಯವನ್ನ ಎತ್ತಿ ಕಟ್ಟಬಾರದು. ಶಾಸಕ ವೇದವ್ಯಾಸ್ ಕಾಮತರ ಹೇಳಿಕೆಯು ರಾಜಕೀಯ ಪ್ರಬುದ್ಧತೆಗೆ ಶೋಭೆ ಅಲ್ಲ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಮಂಗಳೂರು ಕೆಥೋಲಿಕ್ ಮಹಾಸಭಾದ ಅಧ್ಯಕ್ಷ ಆಲ್ವಿನ್ ಡಿಸೋಜ, ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷ ದಿನೇಶ್ ರೈ, ಮಹಿಳಾ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷೆ ಚಂದ್ರಿಕಾ ರೈ, ಮುನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಲ್ಪ್ರೆಡ್ ಡಿಸೋಜ, ಕಾರ್ಯದರ್ಶಿ ಮನ್ಸೂರ್ ಮಂಚಿಲ ಉಪಸ್ಥಿತರಿದ್ದರು.