ಕಾಂತಾವರ ಕನ್ನಡ ಸಂಘದ ನಾಲ್ಕು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

ಕಾಂತಾವರ ಕನ್ನಡ ಸಂಘದ ನಾಲ್ಕು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ


ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಿದೆ.

ಸರಸ್ವತಿ ಬಲ್ಲಾಳ್ ಮತ್ತು ಡಾ. ಸಿ.ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಬಂಟ್ವಾಳದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಸ್ಥಾಪಕರಾದ ಇತಿಹಾಸ ಪ್ರಾಧ್ಯಾಪಕ ಪ್ರೊ. ತುಕರಾಂ ಪೂಜಾರಿಯವರಿಗೆ, ಹಿರಿಯ ಭಾಷಾತಜ್ಞ ಡಾ. ಯು.ಪಿ. ಉಪಾಧ್ಯಾಯ ಅವರ ಹೆಸರಿನ ‘ಮಹೋಪಾಧ್ಯಾಯ ಪ್ರಶಸ್ತಿ’ಯನ್ನು ಕರಾವಳಿ ಭಾಗದ ಕನ್ನಡ ಸಾಹಿತ್ಯ ವಲಯದ ಪ್ರಮುಖ ಸಂಪನ್ಮೂಲ ವ್ಯಕ್ತಿ ಆಗಿರುವ ಪ್ರೊ. ವರದರಾಜ ಚಂದ್ರಗಿರಿ ಅವರಿಗೆ, ಧಾರವಾಡದ ಹಿರಿಯ ಸಾಹಿತಿ ಡಾ.ಜಿ.ಎಂ. ಹೆಗಡೆ ಅವರ ದತ್ತಿನಿಧಿಯ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ಕಾಸರಗೋಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಯು. ಮಹೇಶ್ವರಿ ಅವರಿಗೆ ಮತ್ತು ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ ‘ಮಂಜನಬೈಲ್ ರಂಗಸನ್ಮಾನ್’ ಪ್ರಶಸ್ತಿಯನ್ನು ಕಲಾವಿದ, ನಟ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಬೆಳಗಾವಿಯ ಡಾ. ಅರವಿಂದ ಕುಲಕರ್ಣಿ ಅವರಿಗೆ ನೀಡಲಾಗುವುದೆಂದು ನಿರ್ಣಯಿಸಲಾಗಿದೆ. 

ಪ್ರಶಸ್ತಿಯು ತಲಾ 10,000 ರೂ.ಗಳ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನಗಳನ್ನು ಒಳಗೊಂಡಿದ್ದು ಇದೇ ನ.1 ರಂದು ನಡೆಯುವ ‘ಕಾಂತಾವರ ಉತ್ಸವ’ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article