ಮೂಡುಬಿದಿರೆಯಲ್ಲಿ ಮೂಲ್ಕಿ ತಾಲೂಕು ಮಟ್ಟದ ಕ್ರೀಡಾಕೂಟ
Tuesday, October 1, 2024
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ ಹಾಗೂ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಮಂಗಳವಾರ ಮೂಲ್ಕಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯನ್ನು ಬದುಕಿನ ಮುಖ್ಯ ಅಂಗವಾಗಿ ಪರಿಗಣಿಸಬೇಕು. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ. ಜಯಣ್ಣ ಮಾತನಾಡಿ, ಪದವಿಪೂರ್ವ ಹಂತದ ಫಲಿತಾಂಶದಲ್ಲಿ ದ.ಕ ಜಿಲ್ಲೆ ಮುಂಚೂಣಿಯಲ್ಲಿದ್ದು ಕ್ರೀಡಾ ಚಟುವಟಿಕೆಗಳಲ್ಲಿಯೂ ಮುಂಚೂಣಿಗೆ ಬರಬೇಕು. ಇಲಾಖೆಯ ನಿಯಮಾವಳಿಯಂತೆ ಸ್ಪರ್ಧಿಸಿ. ತೀರ್ಪುಗಾರರ ತೀರ್ಪನ್ನು ಗೌರವಿಸಿ ಎಂದು ಕಿವಿಮಾತು ಹೇಳಿದರು.
ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಭಾಸ್ಕರ ಎಂ. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ರವೀಂದ್ರ ಸುವರ್ಣ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ಭಾರತ್ ಬ್ಯಾಂಕ್‌ನ ಪ್ರಬಂಧಕರಾದ ಸುಹಾನ್, ಶಕುಂತಳಾ, ತಾಲೂಕು ಕ್ರೀಡಾ ಸಂಯೋಜಕ ನಂದನ್ ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಿ.ಡಿ. ಜಯಣ್ಣ ಹಾಗೂ ಪಾಂಪೈ ಪಿಯು ಕಾಲೇಜಿನ ದೈಹಿಕ ಶಿಕ್ಷಕ ಆಲ್ವಿನ್ ಮಿರಾಂದ ಅವರನ್ನು ಸನ್ಮಾನಿಸಲಾಯಿತು. ನಾರಾಯನ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಾಲಚಂದ್ರ ಸಾಲ್ಯಾನ್ ಸ್ವಾಗತಿಸಿದರು. ಉಪನ್ಯಾಸಕ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು.