ಮೈಸೂರು ದಸರಾ ನೆನಪಿನ ಆಗರ, ಮತ್ತೆ ಕಾಡುತ್ತಿದೆ ಅದೇ ನೆನಪುಗಳ ಬುತ್ತಿ...

ಮೈಸೂರು ದಸರಾ ನೆನಪಿನ ಆಗರ, ಮತ್ತೆ ಕಾಡುತ್ತಿದೆ ಅದೇ ನೆನಪುಗಳ ಬುತ್ತಿ...


ದಸರಾ ಎಂಬ ಶಬ್ಧ ಕಿವಿ ಮೇಲೆ ಬಿದ್ದ ಕೂಡಲೇ ಅದೇನೋ ಒಂಥರಾ ಸಂಭ್ರಮ ಮನಸ್ಸಿನಲ್ಲಿ ಮೂಡುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ನೆನಪು ತೆರೆದುಕೊಳ್ಳುತ್ತದೆ. ಅದೇ ರೀತಿ ನನಗೂ ದಸರಾ ಎಂದರೆ ಮೈಸೂರಿನ ದಿನಗಳು ನೆನಪಾಗುತ್ತದೆ. ನಾನು ಮೂಲತಃ ಮಂಡ್ಯ ಜಿಲ್ಲೆಯವಳಾದರೂ ಓದಿದ್ದು ಮೈಸೂರಾದ್ದರಿಂದ ದಸರಾ ಬಗೆಗೆ ವಿಶೇಷ ಒಲವು. ದಸರಾ ಎಂದ ಕೂಡಲೇ ಮೈಸೂರಿನ ಕಡೆಗೆ ಮನಸ್ಸು ವಾಲುತ್ತದೆ. ಅಲ್ಲಿ ಕಳೆದ ಪ್ರತಿ ಕ್ಷಣಗಳನ್ನು ಮನಸ್ಸಿನ ಪುಟಗಳ ಮೇಲೆ ಸುಮ್ಮನೆ ಹರಡಿ ಹೋಗುತ್ತದೆ.
ನಾನು ಆಗ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದೆ. ಪತ್ರಿಕೋದ್ಯಮ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ನಮಗೆ ದಸರಾ ಸಂದರ್ಭದಲ್ಲಿ ವಿಶೇಷ ಸಂಚಿಕೆಗೆ ವಿಶೇಷ ವರದಿಗಳನ್ನು ತರುವಂತೆ ಕಾಲೇಜಿನ ಉಪನ್ಯಾಸಕರು ನಮ್ಮನ್ನು ದಸರಾ ವರದಿಗಾರಿಕೆಗೆ ಹಚ್ಚುತ್ತಿದ್ದರು. ಹಾಗಾಗಿ ನಮಗೆ ಒಂಥರಾ ಸಂಭ್ರಮದ ಜೊತೆಗೆ ದಸರಾವನ್ನು ಹತ್ತಿರದಿಂದ ನೋಡಿ ಅನುಭವಿಸಲು ಸಾಧ್ಯವಾಗುತ್ತಿತ್ತು.
ದಸರಾಗೆ ತಯಾರಿ ಆರಂಭವಾಗುತ್ತಿದ್ದಂತೆ ನಾವೂ ಸೂಕ್ತ ತಯಾರಿ ಮಾಡಿಕೊಳ್ಳುತ್ತಿದ್ದೆವು. ಪತ್ರಿಕೆಯಲ್ಲಿ ಪ್ರಕಟವಾಗುವ ದಸರಾ ಕಾರ್ಯಕ್ರಮಗಳ ಪಟ್ಟಿಯನ್ನು ಪ್ರತ್ಯೇಕವಾಗಿ ತೆಗೆದಿರಿಸಿಕೊಂಡು ಪ್ರತಿದಿನವೂ ತಪ್ಪದೇ ವಿವಿಧ ರೀತಿಯ ಕಾರ್ಯಕ್ರಮಗಳಿಗೆ ಹಾಜರಿ ಕೊಡುತ್ತಿದ್ದೆವು. ಈ ವೇಳೆ ಮೈಸೂರು ನಗರವನ್ನು ನೋಡಲು ಅಕ್ಷರಶಃ ನವವಧುವಿನಂತೆಯೇ ಕಂಗೊಳಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತಿತ್ತು. ಆಗ ಆ ಕ್ಷಣಕ್ಕೆ ನಾವು ಸ್ವರ್ಗದಲ್ಲೇ ಇದ್ದೇವೆ ಎನ್ನುವಷ್ಟು ಹುರುಪು ಮೂಡುತ್ತಿತ್ತು. ಅಲ್ಲದೇ, ದಸರಾ ದರ್ಬಾರಿಗೆ ನಾವೂ ಸಾಕ್ಷಿಯಾಗುತ್ತಿದ್ದೇವೆ ಎಂಬ ಹಮ್ಮೂ ನಮ್ಮಲ್ಲಿ ಮನೆ ಮಾಡುತ್ತಿದ್ದುದು ಸುಳ್ಳಲ್ಲ.
ದಸರಾ ಸಂಭ್ರಮದಲ್ಲಿ ಭಾಗಿಯಾಗುವುದೇ ಒಂದು ರೀತಿಯ ಸುಯೋಗ ಎನಿಸುತ್ತಿತ್ತು. ಅದೇ ಕಾರಣಕ್ಕೆ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೇ ಹಾಜರಿ ನೀಡುತ್ತಿದ್ದೆವು. ಪತ್ರಿಕೆಯಲ್ಲಿ ಪ್ರಕಟವಾದ ಕಾರ್ಯಕ್ರಮಗಳನ್ನು ಗುರುತು ಮಾಡಿಕೊಂಡು ನಮ್ಮಲ್ಲೇ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬಂದು ಇಡೀ ಮೈಸೂರನ್ನು ಸುತ್ತು ಹಾಕಲು ಸಿದ್ಧರಾಗುತ್ತಿದ್ದೆವು. ಯಾವುದೇ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಅರಮನೆ ಮೈದಾನಕ್ಕೆ ಬಂತೆಂದರೆ ಸಾಕು ಅದೇನೂ ಒಂಥರಾ ಫುಳಕವಾಗುತ್ತಿತ್ತು. ಹಾಗಾಗಿ ಚಾಚೂ ತಪ್ಪದೇ ಪ್ರತಿದಿನದ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದೆವು. ರಂಗಾಯಣದಲ್ಲಿ ನಡೆಯುವ ನವರಾತ್ರಿ ರಂಗೋತ್ಸವಕ್ಕೆ ತಪ್ಪದೇ ಹಾಜರಿ ಕೊಡುತ್ತಿದ್ದ ಆ ದಿನಗಳು ಇಂದಿಗೂ ಮನಸ್ಸಿನಲ್ಲಿ ಹಚ್ಛ ಹಸಿರಾಗಿದೆ.
ಇನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆಯುವ ಆಹಾರ ಮೇಳಕ್ಕೆ ತೆರಳಿ ಅಲ್ಲಿಯ ರುಚಿ ಸವಿಯದೇ ಹೋದರೆ ದಸರಾ ಸಂಪೂರ್ಣವಾಗುವುದೆಂತು. ಮೃಗಾಲಯದ ಬಳಿ ಪ್ರತಿವರ್ಷವೂ ಒಂದೊಂದು ಪುರಾಣ ಕಥೆಯನ್ನು ಆಧರಿಸಿ ಜೋಡಿಸುವ ಗೊಂಬೆ ಮನೆ, ಫಲಪುಷ್ಪ ಪ್ರದರ್ಶನ, ವಿಟೇಂಜ್ ಕಾರು, ಬೈಕುಗಳ ಪ್ರದರ್ಶನ, ರೈತ ದಸರಾ, ಮಹಿಳಾ ದಸರಾ, ಕವಿ ಗೋಷ್ಠಿ, ಸಿನಿಮಾ ಪ್ರದರ್ಶನ, ಯುವ ಜನರ ಮೆಚ್ಚಿನ ಯುವ ದಸರಾ ಹೀಗೆ ಒಂದಾ ಎರಡಾ; ಸಾಲು ಸಾಲು ಕಾರ್ಯಕ್ರಮಗಳು. ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೂ ಹಬ್ಬವೇ.
ಕೆಲಸದ ನಿಮಿತ್ತ ಅನಿವಾರ್ಯವಾಗಿ ಮೈಸೂರು ಬಿಟ್ಟು ಹೊರಡುವಾಗ ಕಾಡಿದ್ದು ಇದೇ ರಂಗಾಯಣ, ಅರಮನೆ, ದಸರಾ ಸಂಭ್ರಮಗಳೇ. ಮೈಸೂರು ಎಂದರೆ ಇಂದಿಗೂ ನನಗೆ ಮೊದಲ ತವರು ಮನೆ ಎಂದೇ ಭಾಸವಾಗುತ್ತದೆ. ಎಲ್ಲರನ್ನು ತನ್ನತ್ತ ಸೆಳೆದು ಅಪ್ಪಿಕೊಳ್ಳುವ ಅದೇನೋ ಸೆಳೆತ ಅಲ್ಲಿದೆ. ಮಂಗಳೂರಿಗೆ ಬಂದು ಆರು ವರ್ಷಗಳೇ ಸಂದರೂ ಮೈಸೂರಿನ ಸೆಳೆತ ಮಾತ್ರ ಕಡಿಮೆಯಾಗಿಲ್ಲ. ಅಲ್ಲಿ ಕಳೆದ ಪ್ರತಿಕ್ಷಣದ ನೆನಪು ಇಂದಿಗೂ ಮನಸ್ಸಿನ ಪುಟಗಳಲ್ಲಿ ಹಸಿಯಾಗಿದೆ. ಈಗ ಮೈಸೂರು ಸಾಕಷ್ಟು ಬದಲಾಗಿದೆಯದರೂ, ಅಲ್ಲಿ ಸವಿದ ದೋಸೆ, ಪಾನಿಪೂರಿ, ಚುರ್ಮುರಿ, ಫಲಾಮೃತದ ಜ್ಯೂಸ್ ಸವಿ ಬೇರೆ ಎಲ್ಲೇ ಹೋದರೂ ಸಿಗುತ್ತಿಲ್ಲ ಎಂಬ ಕೊರಗೂ ಇದೆ.
ಮತ್ತೊಮ್ಮೆ ದಸರಾ ಸಂಭ್ರಮ ಶುರುವಾಗಿದೆ. ಮತ್ತೊಮ್ಮೆ ನವವಧುವಿನ ಹಾಗೆ ಶೃಂಗಾರ ಮಾಡಿಕೊಂಡು ನಳನಳಿಸುತ್ತಿದೆ. ಮನಸ್ಸು ಮತ್ತೆ ಆ ಕಡೆಗೆ ವಾಲಲು ಆರಂಭಿಸಿದೆ. ದಸರಾ ಸಂದರ್ಭದಲ್ಲಿ ಭಾಗವಹಿಸಿದ ಪ್ರತಿಕ್ಷಣವೂ ನೆನಪಿನ ಸುರುಳಿಯಾಗಿ ಮತ್ತೆ ಮತ್ತೆ ಕಾಡುತ್ತಿದೆ ಮೈ(ನನ್ನ)ಸೂರು.


-ಡಾ. ಸೌಮ್ಯ ಕೆ.ಬಿ., ಕಿಕ್ಕೇರಿ




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article