ನಮ್ಮ ಮಂಗಳೂರು ದಸರಾ: ನಮ್ಮ ಅಸ್ಥಿತ್ವ...

ನಮ್ಮ ಮಂಗಳೂರು ದಸರಾ: ನಮ್ಮ ಅಸ್ಥಿತ್ವ...


ಮೈಸೂರು ಸಾಮಾನ್ಯವಾಗಿ ದಸರಾವನ್ನು ಆಚರಿಸುವಲ್ಲಿ ಹೆಸರುವಾಸಿಯಾಗಿದೆ. ಆದರೆ ಮೈಸೂರಿನ ನಂತರ ದಸರಾ ಆಚರಣೆಗಳಿಗೆ ಹೆಸರಾದ ಸ್ಥಳವೆಂದರೆ ಮಂಗಳೂರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ  ದೇವಸ್ಥಾನದ ವತಿಯಿಂದ ಮಂಗಳೂರು ದಸರಾ ಮಹೋತ್ಸವ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿರುವುದು ವಿಶೇಷ.
ಮಂಗಳೂರು ದಸರಾವು ರಥೋತ್ಸವ ಎಂದು ಕರೆಯಲ್ಪಡುವ ಭವ್ಯ ಮೆರವಣಿಗೆಯನ್ನು ಒಳಗೊಂಡಿದೆ. ಇದರಲ್ಲಿ ಎಂಜಿ ರಸ್ತೆ, ಕೆಎಸ್ ರಾವ್ ರಸ್ತೆ, ಮತ್ತು ಜಿಎಚ್‌ಎಸ್ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿರುತ್ತವೆ.
ವಾದ್ಯಮೇಳ, ಚೆಂಡೆ, ಜಾನಪದ ಕುಣಿತ, ಯಕ್ಷಗಾನ ಪಾತ್ರಧಾರಿಗಳು, ಹುಲಿವೇಶ, ಡೊಳ್ಳು ಕುಣಿತ, ಗೊಂಬೆಗಳು ರಥೋತ್ಸವ ಮೆರವಣಿಗೆಗೆ ಮೆರಗು ನೀಡುತ್ತವೆ. ಮಂಗಳೂರು ದಸರಾದ ಮತ್ತೊಂದು ಪ್ರಮುಖ ಆಕರ್ಷಣೆ ಕುದ್ರೋಳಿ ದೇವಸ್ಥಾನಗಳಲ್ಲಿ ಗಂಗಾವತರಣ. ನವರಾತ್ರಿಯ ಒಂಬತ್ತು ದಿನಗಳಲ್ಲಿ, ದೇವಾಲಯದ ಟ್ರಸ್ಟ್ ಗಂಗಾವತರಣವನ್ನು ಆಯೋಜಿಸುತ್ತದೆ. ಈ ಸಮಯದಲ್ಲಿ 100 ಅಡಿ ಎತ್ತರದ ನೀರಿನ ಜೆಟ್ ಹೊಂದಿರುವ ನಾಲ್ಕು 13 ಅಡಿ ಎತ್ತರದ ವರ್ಣರಂಜಿತ ಶಿವನ ವಿಗ್ರಹಗಳನ್ನು ಕಾಣಬಹುದು. ನಾಲ್ಕು ಕಡೆಯಿಂದ ನೀರು ಉತ್ತುಂಗಕ್ಕೆ ಬರುತ್ತಿದ್ದಂತೆ ಶಿವಲಿಂಗದ ಆಕಾರವನ್ನು ಪಡೆಯುತ್ತವೆ ಎಂಬುದು ಆಕರ್ಷಣೆ. ಇದು ನಿಜಕ್ಕೂ ಒಂದು ಭವ್ಯವಾದ ದ್ರಶ್ಯವಾಗಿದೆ. ತುಳುವಿನಲ್ಲಿ ಪಿಲಿವೇಷ ಅಥವಾ ಕನ್ನಡದಲ್ಲಿ ಹುಲಿವೇಷ ಎಂದು ಕರೆಯಲ್ಪಡುವ ರಾಯಲ್ ಟೈಗರ್ ಡ್ಯಾನ್ಸ್ ಜನಪ್ರಿಯ ಕರಾವಳಿ ಕರ್ನಾಟಕದ ಜಾನಪದ ನೃತ್ಯವಾಗಿದೆ. ಶಾರದಾ ದೇವಿಯನ್ನು ಗೌರವಿಸುವುದೇ ಹುಲಿವೇಷದ ಮಹತ್ವ. ಮಂಗಳೂರಿನ ಪ್ರತಿಷ್ಠಿತ ಹುಲಿಕುಣಿತ ತಂಡಗಳಿಗೆ ‘ಪಿಲಿನಲಿಕೆ’ ಸ್ವರ್ಧೆಯನ್ನೂ 5 ರಿಂದ 6 ದಿನಗಳ ಕಾಲ ನೆಹರು ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ.
ಕುದ್ರೋಳಿ ಅಲ್ಲದೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಉರ್ವ, ಸುರತ್ಕಲ್, ಕಾರ್‌ಸ್ಟ್ರೀಟ್‌ನ  ವೆಂಕಟರಮಣ ದೇವಸ್ಥಾನ ಹೀಗೆ ಹಲವಾರು ಕಡೆಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಶಾರದಾದೇವಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತದೆ. ದಸರಾದ ಸಂದಭದಲ್ಲಿ ನವ ದುರ್ಗೆಯರನ್ನು ದಿನಕ್ಕೆ ಒಂದು ಅವತಾರದಂತೆ ಒಂಭತ್ತು ದಿನಗಳಕಾಲ ಪೂಜಿಸಿ ವಿಜಯದಶಮಿಯಂದು ನವದುರ್ಗೆಯರ ವಿಸರ್ಜನೆ ಸಂದರ್ಭದಲ್ಲಿ ಜನಸಾಗರವೇ ಹರಿದು ಬಂದು ದೇವಿಯ ವಿಸರ್ಜನೆಯನ್ನು ಅದ್ದೂರಿಯಾಗಿ ನೆರವೇರಿಸುವು ಇಲ್ಲಿಯ ವಿಶೇಷ.


-ಸೌಮ್ಯ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article