ನಮ್ಮ ಹಳ್ಳಿಯ ದಸರಾ ಹಬ್ಬ: ಸಡಗರಕ್ಕೆ ಮತ್ತೊಂದು ಹೆಸರು
Sunday, October 6, 2024
ಭಾರತ ಹಬ್ಬಗಳ ನಾಡು.ದೇಶದ ಪ್ರಮುಖಹಬ್ಬಗಳಲ್ಲಿ ದಸರಾ ಕೂಡ ಒಂದು. ಈ ಹಬ್ಬವನ್ನು ವಿಜಯದಶಮಿ ಮತ್ತು ನಾಡಹಬ್ಬ ಎಂದೂ ಕರೆಯುತ್ತಾರೆ. ಆಶ್ವೀಜ ಮಾಸದ ಶುದ್ಧ ಪಾಡ್ಯದಂದು ದಸರಾ ಕಳಸವನ್ನು ಸ್ಥಾಪಿಸಲಾಗುತ್ತದೆ. 9 ದಿನಗಳ ಕಾಲ ಬಹಳ ಆಡಂಬರ ಮತ್ತು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ.ದಸರಾ ಹಬ್ಬವನ್ನು ದೇಶದಾದ್ಯಂತ ಜನರು ಪ್ರತಿವರ್ಷ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ನಮ್ಮ ಗ್ರಾಮದಲ್ಲಿ ಈ ಬಾರಿ ದಸರಾ ಹಬ್ಬವನ್ನು ಅಕ್ಟೋಬರ್ 10,11,12ರಂದು ನಡೆಸಲಾಗುತ್ತದೆ.
ದಸರಾ ಹಬ್ಬವೆಂದರೆ ಅದೊಂದು ಜಾತ್ರೆಯ ಸಂಭ್ರಮದಂತೆಯೇ ಇರುತ್ತದೆ. ಗ್ರಾಮದ ಜನರೆಲ್ಲರೂ ಜಾತ್ರೆಗೆ ಸೇರಿದಂತೆ ಸೇರಿ ಆಚರಿಸುತ್ತಾರೆ. ಇಡೀ ಊರಿಗೆ ಊರೇ ಸೇರಿ ಆಚರಿಸುವಂತಹ ಹಬ್ಬ ದಸರಾ. ಈ ವೇಳೆ ಮಕ್ಕಳಿಗೆ ವಿಶೇಷವಾದ ಆಟಗಳನ್ನು ಆಡಿಸುತ್ತಾರೆ. ಕಬಡ್ಡಿ, ಲಿಂಬೆ ಚಮಚ ಸೇರಿದಂತೆ ನಾನಾ ರೀತಿಯ ಮನರಂಜನಾತ್ಮಕಆಟಗಳನ್ನು ಆಡಿಸುತ್ತಾರೆ. ಹಬ್ಬದ ದಿನದಂದು ಊರಿನ ಹೆಣ್ಣು ಮಕ್ಕಳು, ಮುತ್ತೈದೆಯರು ಸೇರಿ ಕಳಸ ಎತ್ತುತ್ತಾರೆ ಹಾಗೂ ದೇವಿಗೆ ಪೂಜೆ ಮಾಡುತ್ತಾರೆ.
ದಸರಾ ಹಬ್ಬದ ಆಚರಣೆಗೆ ಎಲ್ಲಾ ಹೆಣ್ಣುಮಕ್ಕಳಿಗೆ ಒಂದೇ ತರಹ ಸೀರೆ ಖರೀದಿಸಿ, ಕಳಸ ಎತ್ತಿ ಮನೆಯ ಹೆಣ್ಣು ದೇವರಿಗೆ ಪೂಜೆ ಸಲ್ಲಿಸಿ ಕಂಕಣ ಕಟ್ಟಿಕೊಳ್ಳುತ್ತಾರೆಹಾಗೂ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಬೆಳಗ್ಗೆಯೇ ತಣ್ಣೀರು ಸ್ನಾನ ಮಾಡಿ ಎಲ್ಲರೂ ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡಿ ಕೆಂಡ ತುಳಿಯುತ್ತಾರೆ.ತುಳಿದ ಮೇಲೆ ನಮ್ಮ ಹಳ್ಳಿಯ ದೇವರು ಮಾರಮ್ಮ, ಚೌಡಮ್ಮ, ಮದ್ದೂರಮ್ಮನಿಗೆ ಪೂಜೆ ಸಲ್ಲಿಸಿ, ದೇವಿಯರ ವಿಗ್ರಹಗಳನ್ನು ತಲೆಯ ಮೇಲೆ ಹೊತ್ತುಕೊಂಡು ಊರು ಮೆರವಣಿಗೆ ಬರುತ್ತಾರೆ.
ನಮ್ಮ ಕಷ್ಟವೆಲ್ಲಾ ಪರಿಹಾರಗೊಳ್ಳಲಿಎಂದು ಮಾರಮ್ಮ, ಚೌಡಮ್ಮ ಮದ್ದೂರಮ್ಮನನ್ನು ಕೇಳಿಕೊಳ್ಳುತ್ತಾರೆ. ದಸರಾ ಹಬ್ಬವೆಂದರೆ ಎಲ್ಲಿಲ್ಲದ ಸಡಗರ ಸಂಭ್ರಮದಿಂದ ನಮ್ಮ ಊರಿನಲ್ಲಿ ಆಚರಿಸುತ್ತಾರೆ.ಉಳಿದ ಸಂದರ್ಭದಲ್ಲಿ ಖಾಲಿ ಎನಿಸುವ ಊರು ದಸರಾ ಹಬ್ಬ ಬಂದರೆ ಸಾಕು ಜಾತ್ರೆಯಾಗಿ ಬಿಡುತ್ತದೆ. ದಸರಾ ಹಬ್ಬಕ್ಕಾಗಿ ಮನೆಗಳಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ಮಾಡುತ್ತಾರೆ.ಇದಕ್ಕೂ ಮುನ್ನಾ ತೀರಿಹೋದ ಹಿರಿಯರಿಗೆ ಪೂಜೆ ಮಾಡಿ ಹಲವು ಬಗೆಯ ಅಡಿಗೆಯನ್ನು ಮಾಡಿ ಬಡಿಸಲಾಗುತ್ತದೆ. ಇದನ್ನು ಹಿರಿಯರ ಹಬ್ಬ ಎಂದೂ ಕರೆಯಲಾಗುತ್ತದೆ. ಒಟ್ಟಾರೆಯಾಗಿ ದಸರಾ ಎಂದರೆ ಪ್ರತಿ ಮನೆ-ಮನದಲ್ಲೂ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ಅದನ್ನೇ ನೋಡಿ ಅನುಭವಿಸುವುದೇ ಒಂದು ಸಂಭ್ರಮ.
-ಆಶಾ ಎ.ಆರ್.
ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
