ರಾಜ್ಯದ 12 ಲಕ್ಷ ಬಿಪಿಎಲ್ ಕಾರ್ಡು ರದ್ದು: ಗೃಹಲಕ್ಷ್ಮಿ ಹಣ ಉಳಿತಾಯ..!: ಕೋಟ ಶಂಕೆ

ರಾಜ್ಯದ 12 ಲಕ್ಷ ಬಿಪಿಎಲ್ ಕಾರ್ಡು ರದ್ದು: ಗೃಹಲಕ್ಷ್ಮಿ ಹಣ ಉಳಿತಾಯ..!: ಕೋಟ ಶಂಕೆ


ಪುತ್ತೂರು: ಗೃಹಲಕ್ಷ್ಮಿ ಯೋಜನೆಯಡಿ ಹಣ ನೀಡಲು ಅಸಾಧ್ಯವಾಗುತ್ತಿದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ 12 ಲಕ್ಷ ಬಿಪಿಎಲ್ ಕಾರ್ಡುಗಳನ್ನು ಸರ್ಕಾರ ರದ್ದು ಮಾಡುತ್ತಿದೆ ಎಂಬ ಶಂಕೆ ಉಂಟಾಗಿದ್ದು, ಈ ಕಾರ್ಡು ರದ್ದು ವಿರುದ್ಧ ಬಿಜೆಪಿ ದೊಡ್ಡಮಟ್ಟದ ಹೋರಾಟ ನಡೆಸಲಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಸ್ರೀನಿವಾಸ ಪೂಜಾರಿ ಹೇಳಿದರು. 

ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ  ಪುತ್ತೂರಿಗೆ ಆಗಮಿಸಿದ್ದ ಅವರು ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮುಂದಿನ ಹಂತದಲ್ಲಿ ಬಿಪಿಎಲ್ ಕಾರ್ಡುದಾರರು ಮಾತ್ರ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ಸರ್ಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮೂಲಕ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಕಾರ್ಡುಗಳನ್ನು ರದ್ದುಪಡಿಸಲು ಮುಂದಾಗಿರುವುದು ಗೃಹಲಕ್ಷ್ಮಿ ಯೋಜನೆಯ ಹಣ ಉಳಿತಾಯವಾಗಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆಯೇ ಎಂಬ ಗುಮಾನಿ ಉಂಟಾಗಿದೆ. ಶ್ರೀಮಂತ ಕುಟುಂಬಗಳಲ್ಲಿ ಬಿಪಿಎಲ್ ಕಾರ್ಡಿದ್ದರೆ ರದ್ದು ಮಾಡಿ ನಮ್ಮ ಆಕ್ಷೇಪ ಇಲ್ಲ. ಆದರೆ ಇದರಿಂದ ಬಡವರಿಗೆ ತೊಂದರೆ ಆಗಬಾರದು ಎಂದು ಅವರು ಹೇಳಿದರು. 

1993ರ ಅವಧಿಯಲ್ಲಿ ಗ್ರಾಪಂಗಳು ಅಸ್ತಿತ್ವಕ್ಕೆ ಬಂದಾಗ ಗ್ರಾಪಂ ಸದಸ್ಯರಿಗೆ 20 ರೂ. ಸಿಟ್ಟಿಂಗ್ ಫೀಸ್ ನೀಡಲಾಗುತ್ತಿತ್ತು. ಅದು ನಿಧಾನವಾಗಿ ಏರುತ್ತಾ ಬಂದಿದ್ದು, 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಸರ್ಕಾರ 27 ಕೋಟಿ ಗೌರವ ಧನ ಬಿಡುಗಡೆ ಮಾಡಿತ್ತು. 2021ರಲ್ಲಿ ನಾನು ವಿಧಾನ ಪರಿಷತ್ ಸದಸ್ಯನಾಗಿ ಮರು ಆಯ್ಕೆಯಾದ ಬಳಿಕ ಸರ್ಕಾರದ ಗಮನ ಸೆಳೆದು ಗ್ರಾಪಂ ಸದಸ್ಯರ ಗೌರವಧನ 2 ಸಾವಿರ, ಉಪಾಧ್ಯಕ್ಷರಿಗೆ ೪ ಸಾವಿರ, ಅಧ್ಯಕ್ಷರಿಗೆ 6 ಸಾವಿರಕ್ಕೆ ಏರಿಸಲಾಯಿತು ಎಂದರು.

ಕಾಂಗ್ರೆಸ್‌ಗೆ ಅನಾಸಕ್ತಿ:

ಸ್ಥಳೀಯ ಸರ್ಕಾರಗಳಾದ ಗ್ರಾಪಂ ಮೂಲಕ ಜನತೆಗೆ ಸಿಗುತ್ತಿದ್ದ 9/11ನ್ನು ಪ್ರಾಧಿಕಾರಕ್ಕೆ ಬದಲಾಯಿಸುವ ಮೂಲಕ ಕಾಂಗ್ರೆಸ್ ಪಂಚಾಯತ್ ರಾಜ್ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಲು ಮುಂದಾಗಿದೆ. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಕಾಂಗ್ರೆಸ್‌ಗೆ ಆಸಕ್ತಿ ಇಲ್ಲ. ಬಿಜೆಪಿ ನಿರಂತರವಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದ್ದರೆ ಕಾಂಗ್ರೆಸ್ ಸ್ಥಳೀಯಾಡಲಿತ ಶಕ್ತಿಯನ್ನು ಕುಂಠಿತಗೊಳಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಕಿಶೋರ್ ಬೊಟ್ಯಾಡಿ ಅವರಂಥ ಒಬ್ಬ ಅತ್ಯಂತ ಸಣ್ಣ ಸಮುದಾಯದ ತರುಣನಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಚಾರಿತ್ರಿಕ ನಿರ್ಧಾರ. ಉಭಯ ಜಿಲ್ಲೆಯಲ್ಲಿರುವ 6040 ಮತದಾರರ ಪೈಕಿ ಈಗಾಗಲೇ ಬಿಜೆಪಿ 1600 ಮತಗಳಿಂದ ಮುಂದಿದೆ. ಇದಲ್ಲದೆ ಇತರ ಪಕ್ಷಗಳ ಮತಗಳೂ ಕೂಡ ನಮಗೆ ಸಿಕ್ಕಿ ದೊಡ್ಡ ಮಟ್ಟದ ಗೆಲುವು ಸಾಧಿಸುವ ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆ ಬಲಪಡಿಸಬೇಕೆಂಬುದು ನಮ್ಮ ಒತ್ತಾಸೆ. ಈಗಾಗಲೇ ೨ ಸುತ್ತಿನ ಪ್ರಚಾರ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು,  ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್, ಅರುಣ್‌ಕುಮಾರ್ ಪುತ್ತಿಲ, ಪುತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ನಿತೀಶ್ ಕುಮಾರ್ ಶಾಂತಿವನ, ಸಂತೋಷ್ ರೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article