
ಹೆಣ್ಣುಮಕ್ಕಳ ಮೇಲಿನ ಕೀಳು ಹೇಳಿಕೆ ವೈರಲ್-ಹೀಜಾವೇ ಪ್ರತಿಭಟನೆ: ಡಿವೈಎಸ್ಪಿ ಕಚೇರಿ ಮುಂದೆ ಭಜನೆ
ಪುತ್ತೂರು: ಹಿಂದೂ ಸಮಾಜದ ಅಮೂಲ್ಯ ನಂಬಿಕೆಯಾಗಿರುವ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಹೆಣ್ಣುಮಕ್ಕಳ ಮೇಲೆ ಅಶ್ಲೀಲ ಹೇಳಿಕೆ ನೀಡಿದ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಆತನ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಬೇಕು. ಆತನನ್ನು ಶಾಶ್ವತ ಇಲ್ಲವಾದರೆ ಎಸಿಎಫ್-ಡಿಸಿಎಫ್ ಕಚೇರಿಗಳಲ್ಲಿ ಅಹೋರಾತ್ರಿ ಧರಣಿ ಹಾಗೂ ಪುತ್ತೂರಿನಲ್ಲಿ ಸ್ವಯಂಘೋಷಿತ ಬಂದ್ ನಡೆಸುವ ಚಿಂತನೆ ನಡೆಸಲಾಗುವುದು ಪೊಲೀಸ್ ಇಲಾಖೆಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ ಘಟನೆ ಹಾಗೂ ಆರೋಪಿ ಬಂಧನಕ್ಕೆ ಪಟ್ಟು ಹಿಡಿದು ಪುತ್ತೂರು ಡಿವೈಎಸ್ಪಿ ಕಚೇರಿ ಮುಂದೆ ಭಜನಾ ಕಾರ್ಯಕ್ರಮ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿರುವ ಸಂಜೀವ ಪೂಜಾರಿ ಕಾಣಿಯೂರು ಅವರು ಮಾತನಾಡಿದ್ದಾರೆ ಎನ್ನುವ ‘ಆಡಿಯೋ’ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಿಲ್ಲವ ಜಾತಿಯ 1 ಲಕ್ಷ ಹೆಣ್ಣು ಮಕ್ಕಳನ್ನು ಭಜನಾ ಕಾರ್ಯಕ್ರಮದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅಶ್ಲೀಲ ಶಬ್ದ ಬಳಕೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಸಂಘಪರಿವಾರ ಸಂಘಟನೆಗಳ ವತಿಯಿಂದ ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಸಾರ್ವಜನಿಕವಾಗಿ ‘ನಾಲಗೆ’ ಕತ್ತರಿಸುತ್ತೇವೆ..:
ಈ ಪ್ರತಿಭಟನೆಯಲ್ಲಿ ಜಾಗರಣಾ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಸಂಯೋಜಕ ಸಮಿತ್‌ರಾಜ್ ಧರೆಗುಡ್ಡೆ ಅವರು ಮಾತನಾಡಿ, ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಸಂಜೀವ ಪೂಜಾರಿಯನ್ನು ಸಾರ್ವಜನಿಕವಾಗಿ ಹೆಣ್ಣು ಮಕ್ಕಳಿಂದ ಚಪ್ಪಲಿಸೇವೆ ಮಾಡಿಸಿ ಬಳಿಕ ಆತನ ನಾಲಿಗೆಯನ್ನು ಕತ್ತರಿಸುವ ಕೆಲಸ ಮಾಡುತ್ತೇವೆ. ಪೊಲೀಸ್ ಇಲಾಖೆ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಪುಗ್ಸಟ್ಟೆ ಕೇಸು ದಾಖಲಿಸಿಕೊಂಡು ಧ್ವಂದ್ವ ನಿಲುವು ಅನುಸರಿಸಿದೆ ಎಂದು ಆರೋಪಿಸಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರು ಮಾತನಾಡಿ, ಸಂಜೀವ ಪೂಜಾರಿ ಕಳೆದ 4 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ನಂಬಿಕೆಗಳನ್ನು ಕೆಡಿಸುತ್ತಾ ಬಂದಿದ್ದಾರೆ. ಆದರೂ ಪೊಲೀಸ್ ಇಲಾಖೆ ಸಮರ್ಪಕ ಕೈಗೊಂಡಿಲ್ಲ. ಅರಣ್ಯ ಇಲಾಖೆ ಈತನನ್ನು ವಜಾ ಮಾಡಿಲ್ಲ. ನಿಮ್ಮನ್ನೂ ನಾವು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ಆತನನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಪೊರಕೆ ಸೇವೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಜನೆ ಹಾದಿ ಹಿಡಿದ ಪ್ರತಿಭಟನೆ:
ಆತನ ಮೇಲೆ ಹಾಲಿರುವುದು ಜಾಮೀನುರಹಿತ ಕೇಸು ಅಲ್ಲ. ಆತನ ಬಗ್ಗೆ ನಮಗೇನೂ ಒಲವಿಲ್ಲ. ಇಂದು ಸಂಜೆಯೊಳಗೆ ಆತನನ್ನು ಬಂಧಿಸಿ ಜೈಲಿಗಟ್ಟುತ್ತೇವೆ ಎಂದು ಪ್ರತಿಭಟನಾಕಾರರಿಗೆ ಡಿವೈಎಸ್ಪಿ ಅರುಣ್ ನಾಗೇಗೌಡ ಭರವಸೆ ನೀಡಿದರು. ಆದರೂ ಜಗ್ಗದ ಪ್ರತಿಭಟನಾಕಾರರು ಈಗಲೇ ಅವನ್ನು ಬಂಧಿಸಿ ಎಂದು ಧರಣಿಗಿಳಿದು ಭಜನೆ ಆರಂಭಿಸಿದರು. ಕೊನೆಗೆ ಡಿವೈಎಸ್ಪಿ ಅವರು ನೀಡಿದ ಭರವಸೆಯಿಂದ ಪ್ರತಿಭಟನೆಯನ್ನು ವಾಪಾಸು ಪಡೆಯಲಾಯಿತು.
ಪ್ರತಿಭಟನೆಯ ‘ಬಿಸಿ’ ಸಂಜೀವ ಪೂಜಾರಿ ಪೊಲೀಸ್ ವಶ:
ಡಿವೈಎಸ್‌ಪಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದಂತೆ ಬೆಳ್ಳಾರೆ ಪೊಲೀಸರು ಪ್ರಸ್ತುತ ಅರೋಪ ಎದುರಿಸುತ್ತಿರುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ. ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳು ಹಾಗೂ ಭಜನಾ ಕಾರ್ಯಕ್ರಮದ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಅವರ ಮೇಲೆ ಕೇಸು ದಾಖಲಾಗಿತ್ತು. ಈ ಆರೋಪದ ಮೇಲೆ ಆತನನ್ನು ಸಂಜೆಯೊಳಗೆ ಬಂಧಿಸುವಂತೆ ಹಿಂಜಾವೇ ಪ್ರತಿಭಟನೆ ನಡೆಸಿ ಗಡು ನೀಡಿತ್ತು. ಪ್ರತಿಭಟನೆ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದು, ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಿಲ್ಲವರ ಮೌನಕ್ಕೆ ಆಕ್ರೋಶ:
ಪುತ್ತೂರು ಸೇರಿದಂತೆ ದಕ ಜಿಲ್ಲೆಯಲ್ಲಿ ಬಹಳಷ್ಟು ಬಿಲ್ಲವ ಸಂಘಟನೆಗಳಿದ್ದರೂ ಯಾರೊಬ್ಬರೂ ಈತನ ವಿರುದ್ಧ ಚಕಾರವೆತ್ತಿಲ್ಲ. ಆತ ಆರೋಪಿಸಿದ 1 ಲಕ್ಷ ಮಂದಿಯಲ್ಲಿ ನಿಮ್ಮ ಕುಟುಂಬದವರು ಇದ್ದಾರೆಯೇ ಎಂಬುವುದನ್ನು ಬಿಲ್ಲವ ಸಂಘದ ಪ್ರಮುಖರು ಹೇಳಬೇಕಾಗಿದೆ. ಬಿಲ್ಲವ ಸಮುದಾಯ ಯಾಕೆ ಮೌನವಾಗಿದೆ ಎಂದು ಸಮಿತ್‌ರಾಜ್ ಅವರು ಬಿಲ್ಲವ ಸಂಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘಪರಿವಾರದ ಸಂಘಟನೆಗಳ ಮುಖಂಡರಾದ ಮುರಳೀಕೃಷ್ಣ ಹಸಂತ್ತಡ್ಕ, ದಿನೇಶ್ ಪಂಜಿಗ, ರವಿರಾಜ್ ಶೆಟ್ಟಿ ಕಡಬ, ಭರತ್ ಈಶ್ವರಮಂಗಲ, ಅನೂಪ್ ಎಣ್ಮೂರು, ಜಯಂತ ಕುಂಜೂರುಪಂಜ, ಸಂತೋಷ್ ಕೈಕಾರ, ಚನಿಲ ತಿಮ್ಮಪ್ಪ ಶೆಟ್ಟಿ, ಡಾ.ಕೃಷ್ಣಪ್ರಸನ್ನ, ಜೀವಂಧರ್ ಜೈನ್, ರಾಜೇಶ್ ಬನ್ನೂರು, ದಾಮೋದರ ಪಾಟಾಳಿ, ಯಶೋದಾ ಗೌಡ, ಚಂದ್ರಕಾಂತಿ ವಿಟ್ಲ ಮತ್ತಿತರರು ಭಾಗಿಯಾಗಿದ್ದರು.