
ಗಾಂಧಿ ‘ಜೊಳ್ಳುತನ’ ವಿಲ್ಲದ ಹೀರೋ: ವಿಜಯಲಕ್ಷ್ಮೀ ಶಿಬರೂರು
ಪುತ್ತೂರು: ಮಹಾತ್ಮ ಗಾಂಧೀಜಿ ಅವರಲ್ಲಿದ್ದ ಸತ್ಯ, ಪ್ರಾಮಾಣಿಕತೆ ಮತ್ತು ಎಲ್ಲರನ್ನೂ ಪ್ರೀತಿಸುವ ಗುಣವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ವಿಶ್ವವೇ ಮಹಾತ್ಮ ಎಂದು ಗೌರವಿಸುತ್ತಿರುವ ಗಾಂಧಿ ಜೊಳ್ಳುತನವಿಲ್ಲದ ಹೀರೋ ಎಂದು ಪತ್ರಕರ್ತೆ ಬೆಂಗಳೂರಿನ ವಿಜಯ ಟೈಮ್ಸ್‌ನ ಮುಖ್ಯ ಸಂಪಾದಕಿ ಹೇಳಿದರು.
ಅವರು ಬುಧವಾರ ಪುತ್ತೂರಿನ ಶಿಕ್ಷಣ ಸಿದ್ದಾಂತಿ ಡಾ. ಎನ್. ಸುಕುಮಾರ ಗೌಡ ಅವರ ದರ್ಬೆ ಮಕ್ಕಳ ಮಂಟಪದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಗಾಂಧಿ ಚಿಂತನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಹಾತ್ಮರ ಬಗ್ಗೆ ಯಾವುದೇ ಮಾತುಗಳನ್ನಾಡಲು ಯೋಗ್ಯತೆಗಳಿರಬೇಕು. ಗಾಂಧೀಜಿಯನ್ನು ಬೊಗಸೆಯಲ್ಲಿ ಅರಿತುಕೊಳ್ಳಲು ಸಾಧ್ಯವಿಲ್ಲ. ಆದರೆ ಗಾಂಧೀಜಿಯ ಬಗ್ಗೆ ಯಾವುದೇ ಅರಿವು ಇಲ್ಲದ ವ್ಯಕ್ತಿಗಳು ಅವರನ್ನು ವಿಲನ್ ಆಗಿ ರೂಪಿಸುತ್ತಿದ್ದಾರೆ. ಅವರ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುತ್ತಾರೆ. ಗಾಂಧೀಜಿ ಬಗ್ಗೆ ಮಕ್ಕಳ ಮನಸ್ಸುಗಳಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಇದೆಲ್ಲವನ್ನೂ ತಡೆಯುವ ನಿಟ್ಟಿನಲ್ಲಿ ಗಾಂಧೀಜಿ ಕುರಿತ ಬರಹಗಳನ್ನು ಹೆಚ್ಚು ಓದಿಕೊಳ್ಳಬೇಕು. ಅಹಿಂಸೆಯ ಮೂಲಕ ಬರಿಗೈಯಲ್ಲಿ ದೇಶವನ್ನು ಒಂದಾಗಿಸಿದ ಕೀರ್ತಿ ಗಾಂಧಿಗೆ ಸಲ್ಲುತ್ತದೆ. ಗಾಂಧೀಜಿಯ ಅಹಿಂಸೆಯ ಅಸ್ತ್ರ ಉಪಯೋಗಿಸದಿದ್ದಲ್ಲಿ ಬ್ರಿಟೀಷರನ್ನು ಭಾರತದಿಂದ ತೆರಳುವಂತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಟಿಆರ್‌ಪಿ-ಹಣದ ಹಿಂದೆ ಮಾಧ್ಯಮ
ಪತ್ರಕರ್ತರು ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯದ ನಂತರದಲ್ಲಿ ದೇಶ ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಮಹಾತ್ಮ ಗಾಂಧೀಜಿ ಅವರೂ ಓರ್ವ ಪತ್ರಕರ್ತರಾಗಿದ್ದರು. ಪತ್ರಿಕೆಯ ಮೂಲಕ ಸಾಮಾಜಿಕ ಬದಲಾವಣೆಯ ಸ್ಪಷ್ಟ ಪರಿಕಲ್ಪನೆ ಅವರಲ್ಲಿತ್ತು. ಅದಕ್ಕಾಗಿ ಹರಿಜನ ಮತ್ತು ಯಂಗ್ ಇಂಡಿಯಾ ಎಂಬ ಪತ್ರಿಕೆಯನ್ನು ಹೊರತರುತ್ತಿದ್ದರು. ಆದರೆ ಇತ್ತೀಚೆಗೆ ಸಂವಿಧಾನದ 4ನೇ ಅಂಗವೆಂದು ಗುರುತಿಸಲ್ಪಟ್ಟಿರುವ ಪತ್ರಿಕೆ ಹಾಗೂ ಮಾದ್ಯಮಗಳು ಟಿಆರ್‌ಪಿ ಮತ್ತು ಹಣಕ್ಕಾಗಿ ತನ್ನೆಲ್ಲಾ ಸಿದ್ದಾಂತಗಳಿಂದ ವಿಮುಖವಾಗುತ್ತಿದೆ. ಅತಿಯಾಸೆ ಮತ್ತು ದುರಾಸೆಗಳಿಗೆ ಒಳಗಾಗುತ್ತಿದೆ. ಸಮಾಜವನ್ನು ಕಟ್ಟಬೇಕಾಗಿರುವ ಮಾದ್ಯಮಗಳಿಂದ ಸಮಾಜ ಒಡೆಯುವ ಕೆಲಸಗಳಾಗುತ್ತಿದೆ ಎಂದು ಹೇಳಿದರು.
ಮಕ್ಕಳ ಮಂಟಪದ ರೂವಾರಿ ಡಾ. ಎನ್. ಸುಕುಮಾರ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಮಂಟಪದ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ನಿರೂಪಿಸಿ ಸ್ವಾಗತಿಸಿದರು. ಬಂಟಮಲೆ ಪ್ರತಿಷ್ಠಾನದ ಸಂಚಾಲಕ ಎ.ಕೆ. ಹಿಮಕರ ವಂದಿಸಿದರು.