ಉಚ್ಚಿಲದಲ್ಲಿ ಶಾರದೆ ಸಹಿತ ನವದುರ್ಗೆಯರ ಜಲಸ್ತಂಭನ
ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದಲ್ಲಿ ನಡೆದ ತೃತೀಯ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವ ಸಂದರ್ಭ ಪ್ರತಿಷ್ಠಾಪಿಸಲಾದ ಶ್ರೀ ಶಾರದಾಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಶನಿವಾರ ರಾತ್ರಿ ಕಾಪು ಕಡಲಿನಲ್ಲಿ ಜಲಸ್ತಂಭನ ಮಾಡಲಾಯಿತು.
ಕಳೆದ 10 ದಿನಗಳಿಂದ ಶ್ರದ್ಧಾಭಕ್ತಿಯಿಂದ ಪೂಜಿಸಿದ್ದ ದಿವ್ಯಮೂರ್ತಿಗಳನ್ನು ಬೀಳ್ಕೊಡುವ ಸಂದರ್ಭ ನೆರೆದ ಮಂದಿ ಭಾವುಕರಾಗಿ ತಮಗರಿವಿಲ್ಲದಂತೆ ಅವರ ಕಣ್ಣಾಲಿಗಳು ತೇವಗೊಂಡವು.
ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಶ್ರೀ ಶಾರದೆ ಮತ್ತು ನವದುರ್ಗೆಯರಿಗೆ ಮಹಾಮಂಗಳಾರತಿ ಬೆಳಗಿದ ಬಳಿಕ ಮಹೋತ್ಸವ ರೂವಾರಿ ಡಾ. ಜಿ. ಶಂಕರ್, ಉಚ್ಚಿಲ ದ.ಕ. ಮೊಗವೀರ ಮಹಾಜನಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಸಹಿತ ಗಣ್ಯರು ಪುಷ್ಪಾರ್ಚನೆ ನಡೆಸುವ ಮೂಲಕ ಆರಂಭಗೊಂಡ ಭವ್ಯ ಶೋಭಾಯಾತ್ರೆ ಉಚ್ಚಿಲದಿಂದ ತೊಡಗಿ ಕಾಪು ದೀಪಸ್ತಂಭ ವರೆಗೆ ಶಿಸ್ತುಬದ್ಧವಾಗಿ ನಡೆಯಿತು.
ಕಾಪು ಬೀಚ್ ಬಳಿ ಬೃಹತ್ ಗಂಗಾರತಿ, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಸಮುದ್ರ ಮಧ್ಯೆ 50ಕ್ಕೂ ಹೆಚ್ಚು ಬೋಟ್‌ಗಳಿಂದ ವಿದ್ಯುದ್ದೀಪಾಲಂಕಾರ, ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಿತು. ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಳಿಕ ನೆರೆದ ಭಕ್ತರ ಜಯಘೋಷದ ನಡುವೆ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಸಮುದ್ರದಲ್ಲಿ ಜಲಸ್ತಂಭನಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಹೋತ್ಸವದ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಉಚ್ಚಿಲ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು ಮತ್ತು ಮೋಹನ್ ಬೇಂಗ್ರೆ, ಉದ್ಯಮಿ ಆನಂದ ಸಿ. ಕುಂದರ್, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಉಚ್ಚಿಲ ದೇವಳದ ವ್ಯವಸ್ಥಾಪಕ ಸತೀಶ ಅಮೀನ್ ಪಡುಕೆರೆ ಮೊದಲಾದವರಿದ್ದರು.